ವಾಟ್ಸಾಪ್ ಗ್ರೂಪ್ ಒಂದಕ್ಕೆ ಅಶ್ಲೀಲ ವಿಡಿಯೋ ಕಳಿಸಿ ಮುಖಭಂಗ ಎದುರಿಸುತ್ತಿರುವ ಗೋವಾ ಉಪಮುಖ್ಯಮಂತ್ರಿ ಚಂದ್ರಶೇಖರ್ ಬಾಬು ಕವಳೇಕರ್ ತನ್ನ ಫೋನನ್ನ ಹ್ಯಾಕ್ ಮಾಡಲಾಗಿದೆ ಅಂತಾ ಆರೋಪಿಸಿ ಪೊಲೀಸರಿಗೆ ದೂರನ್ನ ನೀಡಿದ್ದಾರೆ. ರವಿವಾರ ಮಧ್ಯರಾತ್ರಿ ಇವರ ಮೊಬೈಲ್ನಿಂದ ನೀಲಿ ಚಿತ್ರವೊಂದು ಸಾಮಾಜಿಕ ಚಟುವಟಿಕೆಗಾಗಿ ರಚಿಸಲಾಗಿದ್ದ ಗ್ರೂಪ್ಗೆ ಶೇರ್ ಆಗಿತ್ತು.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ ಚಂದ್ರಶೇಖರ್ ಬಾಬು ದೂರಿನಲ್ಲಿ, ಮಧ್ಯರಾತ್ರಿ ನಾನು ಗಾಢನಿದ್ರೆಯಲ್ಲಿರುವ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ನನ್ನ ನಂಬರ್ನಿಂದ ವಿಲೇಜಸ್ ಆಫ್ ಗೋವಾ ಗ್ರೂಪ್ಗೆ ಅಶ್ಲೀಲ ವಿಡಿಯೋ ಕಳಿಸಿದ್ದಾರೆ.
ಇದು ಯಾವುದೋ ದುರುದ್ದೇಶದಿಂದ ನನ್ನ ವಿರುದ್ಧ ಮಾಡಿರುವ ತಂತ್ರ. ನಾನು ಹಲವಾರು ಗ್ರೂಪ್ಗಳಲ್ಲಿ ಇದ್ದೇನೆ. ಆದರೆ ಎಲ್ಲವನ್ನ ಬಿಟ್ಟು ಇದೊಂದೇ ಗ್ರೂಪ್ಗೆ ವಿಡಿಯೋ ಶೇರ್ ಮಾಡಲಾಗಿದೆ. ನನ್ನ ಹೆಸರನ್ನ ಸಾರ್ವಜನಿಕ ವಲಯದಲ್ಲಿ ಕೆಡಿಸಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅಂತಾ ಮನವಿ ಮಾಡಿದ್ದಾರೆ.