ಆಮ್ಲಜನಕ ಹರಿವಿನ ಮೀಟರ್ ಅನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಿದ್ಧಪಡಿಸಿರುವ ಜಾರ್ಖಂಡ್‌ನ ಫಾರ್ಮಸಿಸ್ಟ್ ಒಬ್ಬರು ಆಸ್ಪತ್ರೆಯೊಂದರಲ್ಲಿರುವ ರೋಗಿಗಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಮಾಡಲು ನೆರವಾಗಿದ್ದಾರೆ.
ಗುಮ್ಲಾ ಸುಂದರ್ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಸ್ಥಿತಿ ತಲುಪಿದ್ದ 60ರಷ್ಟು ರೋಗಿಗಳನ್ನು ಸಂಭವನೀಯ ಆಮ್ಲಜನಕದ ಕೊರತೆಯಿಂದ ಪಾರು ಮಾಡಿರುವ ಶ್ಯಾಮ್ ಕುಮಾರ್ ಎಂಬ ಈ ಫಾರ್ಮಸಿಸ್ಟ್, ಸಂಕಷ್ಟದ ಈ ಸಮಯದಲ್ಲಿ ಲಭ್ಯವಿರುವ ವೈದ್ಯಕೀಯ ಆಮ್ಲಜನಕದ ಮೂಲಗಳನ್ನು ಹೇಗೆ ಬಳಸಿಕೊಳ್ಳುವುದು ಎಂದು ತೋರಿಸಿಕೊಟ್ಟಿದ್ದಾರೆ.
ಆಮ್ಲಜನಕ ಲಭ್ಯವಿದ್ದರೂ ಸಹ ಹರಿವಿನ ಮೀಟರ್‌ಗಳ ಕೊರತೆ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುವುದು ಕಷ್ಟವಿತ್ತು. ಈ ಸಂದರ್ಭದಲ್ಲಿ ಬಳಸದೇ ಬಿಟ್ಟ ಹಾಗೂ ತಿರಸ್ಕೃತಗೊಂಡ 20ರಷ್ಟು ಫ್ಲೋ ಮೀಟರ್‌ಗಳಿಂದ ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು ಒಂದೆಡೆ ಸೇರಿಸಿ ತಮ್ಮದೇ ಹರಿವಿನ ಮೀಟರ್ ಸೃಷ್ಟಿಸಿದ್ದಾರೆ ಕುಮಾರ್.
ಆಮ್ಲಜನಕದ ಫ್ಲೋಮೀಟರ್‌ಗೆ ಅಳತೆಯ ಬಾಟಲಿಗಳನ್ನು ಪಡೆಯಲು ಆಗದೇ, ಆಸ್ಪತ್ರೆಯ ಮೆಟರ್ನಿಟಿ ಶುಶ್ರೂಷೆ ಕೇಂದ್ರದಲ್ಲಿ ಸಿಕ್ಕ ಫೀಡಿಂಗ್ ಬಾಟಲಿಗಳನ್ನೇ ಪಡೆದು ಈ ಪರ್ಯಾಯ ವ್ಯವಸ್ಥೆ ಮಾಡಿದ್ದಾಗಿ ಹೇಳಿದ ಕುಮಾರ್, ಸಂಕಟದ ಸಮಯದಲ್ಲಿ ಉಂಟಾಗಿದ್ದ ಫ್ಲೋಮೀಟರ್‌ಗಳ ಅಭಾವದ ಕಾರಣದಿಂದ ಆಸ್ಪತ್ರೆಯ ಆಡಳಿತದಿಂದ ಈ ಐಡಿಯಾಗೆ ಕೂಡಲೇ ಅನುಮೋದನೆ ಸಿಕ್ಕಿದ್ದು, ಅದೀಗ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.