ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿ ಕಾಂತ ದಾಸ್ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ, ತಮ್ಮ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಿರುವುದಾಗಿ ಅರ್ಜಿದಾರರಾದ ಗೋರಖ್ ಪಾಂಡುರಂಗ್ ನವಾಡೆ, ಸೂರ್ಯಕಾಂತ್ ಪ್ರಭಾಕರ್ ಪವಾರ್, ಪ್ರೀತಂ ಸೆನ್ ಗುಪ್ತಾ ಹಾಗು ಶಾಂತಿ ಜ್ಯುಯೆಲ್ಲರ್ಸ್ ವಕೀಲರಾದ ವಿಶಾಲ್ ಅಭಿಗ್ಯಾ ಕುಶ್ವಾಹಾ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಖಾತೆಯನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸುವ ಮುನ್ನ ಅವರಿಗೆ 90 ದಿನಗಳ ಕಾಲಾವಕಾಶ ಕೊಡಬೇಕೆಂಬ ನಿಯಮಾವಳಿಯನ್ನು ಆರ್‌ಬಿಐ ಉಲ್ಲಂಘನೆ ಮಾಡಿರುವುದಾಗಿ ಅರ್ಜಿದಾರರು ಆಪಾದನೆ ಮಾಡಿದ್ದಾರೆ. ಪರಮೋಚ್ಛ ನ್ಯಾಯಾಲಯದ ಆದೇಶವನ್ನು ಅನೇಕ ಬ್ಯಾಂಕುಗಳು ಉಲ್ಲಂಘನೆ ಮಾಡಿದ ಕಾರಣ ಅನೇಕ ಸಾಲಗಾರರು ಸಂಕಷ್ಟದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ತಂದಿಟ್ಟ ಆರ್ಥಿಕ ಸಂಕಟದ ಕಾರಣದಿಂದಾಗಿ ಎಲ್ಲಾ ಸಾಲಗಾರರಿಗೂ ರಿಲೀಫ್ ಕೊಡಲೆಂದು ಸೆಲ್ಟೆಂಬರ್ 3ರ ಈ ಆದೇಶವನ್ನು ದೇಶದ ಎಲ್ಲಾ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೂ ಅನ್ವಯವಾಗುವಂತೆ ಹೊರಡಿಸಲಾಗಿತ್ತು. ಈ ಉಲ್ಲಂಘನೆಯಿಂದ ಉಂಟಾದ ಹಾನಿಗೆ ದೊಡ್ಡ ಮಟ್ಟದ ಪರಿಹಾರವನ್ನು ಅರ್ಜಿದಾರರು ಕೋರಿದ್ದಾರೆ.