ಶ್ವಾನಗಳು ತಮ್ಮ ಸ್ವಾಮಿನಿಷ್ಠೆಯನ್ನ ತೋರಿಸೋದ್ರಲ್ಲಿ ನಿಸ್ಸೀಮ ಎಂದು ಪದೇ ಪದೇ ಸಾಬೀತು ಪಡಿಸುತ್ತಲೇ ಇರ್ತವೆ. ತಮಿಳುನಾಡಿನಲ್ಲೂ ಶ್ವಾನದ ನಿಯತ್ತನ್ನು ತೋರಿಸುವ ಪ್ರಕರಣವೊಂದು ವರದಿಯಾಗಿದೆ.
ಮಾನಸಿಕ ಅಸ್ವಸ್ಥೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನ ಹಿಡಿಯಲು ಶ್ವಾನ ಯಶಸ್ವಿಯಾಗಿದೆ. ಶ್ವಾನ ಬೊಗಳೋದನ್ನ ಕಂಡು ಮನೆಯಿಂದ ಹೊರಬಂದ ಕುಟುಂಬಸ್ಥರು ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ 29 ವರ್ಷದ ಎಸ್. ದಿಲೀಪ್ಕುಮಾರ್ ಎಂಬಾತ ಶುಕ್ರವಾರ ರಾತ್ರಿ ಸೆಲ್ವಂಪುರನಲ್ಲಿರುವ ಸಂತ್ರಸ್ತೆಯ ಮನೆಗೆ ನುಗ್ಗಿದ್ದ. 30 ವರ್ಷದ ಮಹಿಳೆಯನ್ನ ಮನೆಯ ಪ್ರತ್ಯೇಕ ಶೆಡ್ನಲ್ಲಿ ಇಡಲಾಗಿತ್ತು. ಇದೇ ಶೆಡ್ಗೆ ನುಗಿದ್ದ ಆರೋಪಿ ಅತ್ಯಾಚಾರವನ್ನೆಸಗಿದ್ದ.
ಸಂತ್ರಸ್ತೆಯ ಮನೆಯ ಬಗ್ಗೆ ಚೆನ್ನಾಗಿ ಅರಿತಿದ್ದ ಆರೋಪಿ ತನ್ನ ಮೇಲೆ ಸಂಶಯ ಮೂಡಬಾರದು ಅಂತಾ ತನ್ನ ವಾಹನವನ್ನ ನೂರು ಮೀಟರ್ ಹಿಂದೆಯೇ ಪಾರ್ಕ್ ಮಾಡಿ ಬಂದಿದ್ದ ಎನ್ನಲಾಗಿದೆ.
ದಿಲೀಪ್ಕುಮಾರ್ನನ್ನ ಕಂಡು ಸಂತ್ರಸ್ತೆ ಮನೆಯ ಸಾಕು ನಾಯಿ ಆತನ ಪ್ಯಾಂಟ್ನ್ನು ಕಚ್ಚಿ ಎಳೆದಿದೆ. ಅಲ್ಲದೇ ಶ್ವಾನ ಜೋರಾಗಿ ಬೊಗಳಲು ಆರಂಭಿಸಿದ್ದು ಇದನ್ನ ಕೇಳಿದ ಸಂತ್ರಸ್ತೆ ಕುಟುಂಬಸ್ಥರು ಮನೆಯಿಂದ ಹೊರಬಂದಿದ್ದಾರೆ. ಕೂಡಲೇ ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆಯ ವೇಳೆ ಆರೋಪಿ ಮೊಬೈಲ್ನಲ್ಲಿ ಸಂತ್ರಸ್ತೆಯ ಕೆಲ ಅಶ್ಲೀಲ ವಿಡಿಯೋಗಳು ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ ತನಿಖೆ ವೇಳೆ ಆತ ಸಂತ್ರಸ್ತೆ ವಾಸವಿದ್ದ ಶೆಡ್ಗೆ ಈ ಹಿಂದೆ ಎರಡು ಬಾರಿ ತೆರಳಿದ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿ ಅದನ್ನ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೀಗ ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದಾರೆ.