ಮುಂಬೈ: ನವರಾತ್ರಿಯ ಪ್ರಸಿದ್ಧ ದಾಂಡಿಯಾ, ಗರ್ಭಾ ನೃತ್ಯಗಳಿಗೆ ಕೋವಿಡ್ ತಡೆ ನೀಡಿದೆ. ಆದರೆ, ಮುಂಬೈನ ಕೋವಿಡ್ ಕೇರ್ ಸೆಂಟರ್ ನಲ್ಲಿ ರೋಗಿಗಳು ಗರ್ಭಾ ನೃತ್ಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ ಗೋರೆಗಾಂವ ನೈರುತ್ಯ ಉಪ ನಗರದ ಮಹಾನಗರ ಪಾಲಿಕೆ ಕೋವಿಡ್ ಸೆಂಟರ್ ನಲ್ಲಿ ಸ್ತ್ರೀ ಹಾಗೂ ಪುರುಷ ರೋಗಿಗಳು ಸೇರಿ, ಮಾಸ್ಕ್ ಹಾಕಿಕೊಂಡು ಬಾಲಿವುಡ್ ಹಾಡಿಗೆ ಸಾಂಪ್ರದಾಯಿಕ ಗರ್ಭಾ ನೃತ್ಯ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯೂ ಅದಕ್ಕೆ ಸಾಥ್ ನೀಡಿದ್ದಾರೆ. “ನಾವು ಈ ಕಾರ್ಯಕ್ರಮ ಆಯೋಜಿಸಿಲ್ಲ. ರೋಗಿಗಳು ಖುಷಿಗಾಗಿ ನೃತ್ಯ ಮಾಡಿದ್ದಾರೆ. ನಾವು ಅದಕ್ಕೆ ತಡೆಯೊಡ್ಡಿಲ್ಲ” ಎಂದು ಕಮೀಷನರ್ ಇಕ್ಬಾಲ್ ಸಿಂಗ್ ಚಹಾಲ್ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನವರಾತ್ರಿಯ ಅದ್ದೂರಿ ಆಚರಣೆ ನಿಷೇಧಿಸಲಾಗಿದೆ. ʼನನ್ನ ಕುಟುಂಬ ನನ್ನ ಜವಾಬ್ದಾರಿʼ ಹೆಸರಿನ ಕಾರ್ಯಕ್ರಮ ನಡೆಸಲಾಗುತ್ತಿದೆ. ನವರಾತ್ರಿ ಅಂಗವಾಗಿ ರಕ್ತದಾನ ಶಿಬಿರ ಆಯೋಜನೆ ಮಾಡುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.