ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಖಾಸಗಿ ಕಂಪನಿಗೆ ಸೇರಿದ ಬಸ್ ಇದಾಗಿದ್ದು ಮಂಗಳವಾರ ತಡರಾತ್ರಿ ಪ್ರತಾಪಗಢದಿಂದ ನೋಯ್ಡಾ ಕಡೆ ಸಂಚರಿಸುತ್ತಿತ್ತು. 12 ಮಂದಿ ಪ್ರಯಾಣಿಕರು ಬಸ್ ನಲ್ಲಿ ಇದ್ದರು. ತಡರಾತ್ರಿಯಲ್ಲಿ ಎಲ್ಲರೂ ಗಾಢನಿದ್ದೆಗೆ ಜಾರಿದ್ದ ವೇಳೆ ಬಸ್ ನಲ್ಲಿದ್ದ ಮತ್ತೊಬ್ಬ ಚಾಲಕ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನಿಗೆ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಹಾಗೂ ಕ್ಲೀನರ್ ನೆರವಾಗಿದ್ದಾರೆ.
ಘಟನೆಯ ನಂತರ ಬಸ್ ಚಾಲಕನನ್ನು ಬಂಧಿಸಲಾಗಿದ್ದು ಬಸ್ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಚಾಲಕ, ಕ್ಲೀನರ್ ಹಾಗೂ ಬಸ್ ಮಾಲೀಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗೌತಮ ಬುದ್ಧ ನಗರದಲ್ಲಿ ಬಸ್ ನಿಂದ ಇಳಿದ ಮಹಿಳೆ ಗಂಡನಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು ಆತ ಸ್ಥಳೀಯರ ನೆರವಿನಿಂದ ಬಸ್ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.