
ಪಶ್ಚಿಮ ಬಂಗಾಳದ ಪಕ್ಷ ರಾಜಕಾರಣದ ಸುಳಿಗೆ ಸಿಕ್ಕ ದಾಂಪತ್ಯವೊಂದು ವಿಚ್ಛೇದನ ಪಡೆಯುವತ್ತ ಸಾಗಿದೆ.
ತಮ್ಮ ಪಕ್ಷ ಬಿಟ್ಟು ಟಿಎಂಸಿ ಸೇರಿಕೊಂಡ ತಮ್ಮ ಮಡದಿ ಸುಜಾತಾ ಮೊಂಡಲ್‌ಗೆ ಬಿಜೆಪಿ ಸಂಸದ ಸೌಮಿತ್ರಾ ಖಾನ್ ವಿಚ್ಛೇದನದ ನೋಟಿಸ್ ಕಳುಹಿಸಿದ್ದಾರೆ. “ತ್ರಿವಳಿ ತಲಾಖ್ ನಿಷೇಧಿಸಿದ ಪಕ್ಷವೇ ಇಂದು ನನ್ನ ಪತಿಗೆ ವಿಚ್ಛೇದನ ನೀಡಲು ಹೇಳುತ್ತಿದೆ” ಎಂದು ಸುಜಾತಾ ಆಪಾದನೆ ಮಾಡಿದ್ದಾರೆ.
ರಾಜಕೀಯ ವೈರುಧ್ಯದ ಕಾರಣದಿಂದ ಸೌಮಿತ್ರಾ ಹಾಗೂ ಸುಜಾತಾರ ಹತ್ತು ವರ್ಷಗಳ ಸಂಬಂಧ ಹಾಗೂ 4 ವರ್ಷಗಳ ದಾಂಪತ್ಯ ತೆರೆ ಬೀಳುವ ಹಂತಕ್ಕೆ ತಲುಪಿದೆ. ಪ. ಬಂಗಾಳ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಉಳಿದಿರುವಂತೆ ಬಿಜೆಪಿ ತೊರೆದ 34ರ ಹರೆಯದ ಸುಜಾತಾ, ಟಿಎಂಸಿ ಸೇರಿಕೊಂಡಿದ್ದರು.
ಇದರಿಂದ ಸಿಟ್ಟುಗೊಂಡ ಸೌಮಿತ್ರಾ, ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸುತ್ತಾ, ತಮ್ಮ ಮಡದಿಗೆ ಆಕೆಯ ಹೆಸರಿನಲ್ಲಿರುವ ತಮ್ಮ ಸರ್‌ನೇಮ್ ತೆಗೆದು ಹಾಕಲು ಸೂಚಿಸಿದ್ದಾರೆ. ಇದಾದ ಬೆನ್ನಿಗೇ ಸುಜಾತಾಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದಾರೆ ಸೌಮಿತ್ರಾ.
ತಾವು ಹಾಗೂ ತಮ್ಮ ಕುಟುಂಬಕ್ಕೆ ಸಹಿಸಿಕೊಳ್ಳಲಾರದ ಮಟ್ಟದಲ್ಲಿ ಮಾನಸಿಕ ಕಿರಿಕಿರಿಗಳು ಆದ ಕಾರಣ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ವಿಚ್ಛೇದನದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.