16 ವರ್ಷದ ಹಿರಿಯ ಮಗಳ ಚಿಕಿತ್ಸೆಯ ಖರ್ಚನ್ನ ಭರಿಸಲು ಸಾಧ್ಯವಾಗದ ಆಂಧ್ರ ಪ್ರದೇಶದ ದಿನಗೂಲಿ ಕಾರ್ಮಿಕ ದಂಪತಿ 12 ವರ್ಷದ ತಮ್ಮ ಎರಡನೇ ಮಗಳನ್ನ 46 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ ಅಮಾನವೀಯ ಘಟನೆ ನಡೆದಿದೆ.
16 ವರ್ಷದ ಮಗಳು ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಚಿನ್ನ ಸುಬ್ಬಯ್ಯ ಎಂಬಾತ ಬುಧವಾರ ಮಾರಾಟವಾದ ಅಪ್ರಾಪ್ತೆಯನ್ನ ಮದುವೆಯಾಗಿದ್ದಾನೆ. ಈ ಅಪ್ರಾಪ್ತೆಯನ್ನ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಬಚಾವ್ ಮಾಡಿದ್ದು ಆಕೆಯನ್ನ ಜಿಲ್ಲಾ ಮಕ್ಕಳ ಕೇಂದ್ರಕ್ಕೆ ತಲುಪಿಸಲಾಗಿದೆ.
ಕುಟ್ಟೂರು ಮೂಲದ ದಂಪತಿ ಸುಬ್ಬಯ್ಯರನ್ನ ಸಂಪರ್ಕಿಸಿದ್ದಾರೆ. ಆರಂಭದಲ್ಲಿ ದಂಪತಿ 25 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಸಾಕಷ್ಟು ಚೌಕಾಶಿ ಬಳಿಕ 10 ಸಾವಿರ ರೂಪಾಯಿಗೆ ಮಗಳನ್ನ ಮದುವೆ ಮಾಡಲು ಈ ದಂಪತಿ ನಿರ್ಧರಿಸಿದ್ದರು ಎನ್ನಲಾಗಿದೆ.
ವೈವಾಹಿಕ ಕಲಹದಿಂದಾಗಿ ಸುಬ್ಬಯ್ಯರ ಮೊದಲ ಪತ್ನಿ ಆತನನ್ನ ಬಿಟ್ಟು ಹೋಗಿದ್ದಳು. ಈತ ಈ ಹಿಂದೆಯೂ ದಿನಗೂಲಿ ಕಾರ್ಮಿಕ ದಂಪತಿಯ ಎದುರು ಎರಡನೇ ಮಗಳನ್ನ ಮದುವೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಬಾಲಕಿಯನ್ನ ಖರೀದಿ ಮಾಡಿದ ಬಳಿಕ ಅವಳನ್ನ ಮದುವೆಯಾಗಿ ದಾಮಪುರದಲ್ಲಿರುವ ಸಂಬಂಧಿಕರ ಮನೆಗೆ ಕರೆತಂದಿದ್ದ. ಆಕೆ ಅಳುತ್ತಾ ಹಾಗೂ ಕಿರುಚಾಡುತ್ತಿರೋದನ್ನ ಕೇಳಿದ ನೆರೆಹೊರೆಯವರು ಸುಬ್ಬಯ್ಯನ ಸಂಬಂಧಿಕರ ಮನೆಗೆ ಬಂದಿದ್ದಾರೆ. ಬಳಿಕ ಈ ವಿಚಾರ ಹೊರಬಂದಿದ್ದು ನೆರೆಹೊರೆಯವರು ಸ್ಥಳೀಯ ಮುಖಂಡರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.