ಇದೇ ಡಿಸೆಂಬರ್ ವೇಳೆಗೆ ಕೋವಿಡ್-19 ಸಾಂಕ್ರಮಿಕಕ್ಕೆ ಮದ್ದನ್ನು ಅಭಿವೃದ್ಧಿಪಡಿಸುವ ಕಾರ್ಯ ಪೂರ್ಣವಾಗಲಿದ್ದು, 2021ರ ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ತಿಳಿಸಿದ್ದಾರೆ.
“ಇಬ್ಬರು ಉತ್ಪಾದಕರು ಅದಾಗಲೇ ಮೂರನೇ ಹಂತದಲ್ಲಿರುವ ಕಾರಣ ಭಾರತವು ಕೋವಿಡ್-19 ನಿರೋಧಕ ಮದ್ದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೇಗವಾದ ಹೆಜ್ಜೆ ಇಡುತ್ತಿದೆ. ಮದ್ದಿನ ಉತ್ಪಾದನೆ ಮುಖ್ಯವಾಹಿನಿ ಹಂತಕ್ಕೆ ಬರುತ್ತಲೇ ಸೀರಮ್ ಸಂಸ್ಥೆಯು ವಾರ್ಷಿಕ 700-800 ದಶಲಕ್ಷ ಮದ್ದುಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ,” ಎಂದು ಜಾಧವ್ ಇದೇ ವೇಳೆ ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಮದ್ದಿನ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಪ್ರಗತಿಯಲ್ಲಿದೆ. ಪುಣೆ ಮೂಲದ ಮದ್ದು ಉತ್ಪಾದಕ ಸಂಸ್ಥೆಯೊಂದು ಬ್ರಿಟೀಷ್-ಸ್ವೀಡನ್ ಕಂಪನಿ ಆಸ್ಟ್ರಾಝೆಂಕಾ ಜೊತೆಗೆ ಸೇರಿಕೊಂಡು ಜಂಟಿಯಾಗಿ ಈ ಮದ್ದನ್ನು ಅಭಿವೃದ್ಧಿಪಡಿಸುತ್ತಿವೆ.