ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಗಳು ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ವೇಗವಾಗಿ ನಡೆಯುತ್ತಿದೆ. ಚಂಡೀಗಢದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸುತ್ತಿರುವ ಒಂದು ಅಧ್ಯಯನದಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದೆ.
ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಯಾವುದೇ ಸ್ವಯಂಸೇವಕರಲ್ಲಿ ಅಡ್ಡ ಪರಿಣಾಮ ಕಾಣಿಸಿಲ್ಲವೆಂದು ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಕೆಲವರಲ್ಲಿ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದೆ. ಆದ್ರೆ ಲಸಿಕೆ ಪಡೆದ ನಂತ್ರ ಇದು ಸಾಮಾನ್ಯ. ಇದ್ರಲ್ಲಿ ಆತಂಕಪಡುವ ಅಗತ್ಯವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.
ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆಗಾಗಿ ಎರಡನೇ ಮತ್ತು ಮೂರನೇ ಹಂತದ ಮಾನವ ಪ್ರಯೋಗಗಳು ನಡೆಯುತ್ತಿದೆ. ಈ ಪ್ರಯೋಗಗಳನ್ನು ನಡೆಸುತ್ತಿರುವ 17 ಸಂಸ್ಥೆಗಳಲ್ಲಿ ಪಿಜಿಐಎಂಆರ್ ಒಂದು. ಪ್ರಯೋಗಗಳಲ್ಲಿ ಭಾಗವಹಿಸಿದ 53 ಜನರು ಈಗಾಗಲೇ ಏಳು ದಿನಗಳನ್ನು ಪೂರೈಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪರೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಇಬ್ಬರು ಮಹಿಳೆಯರು ಹಾಗೂ 57 ಪುರುಷರು.
ಕಳೆದ ತಿಂಗಳು,ಈ ಲಸಿಕೆಯ ಪ್ರಯೋಗಗಳನ್ನು ಪ್ರಪಂಚದಾದ್ಯಂತ ನಿಲ್ಲಿಸಲಾಗಿತ್ತು. ಕೆಲವು ರೋಗಿಗಳಲ್ಲಿ ಲಸಿಕೆ ಅಡ್ಡ ಪರಿಣಾಮವಾಗಿದ್ದರಿಂದ ಪ್ರಯೋಗ ನಿಲ್ಲಿಸಲಾಗಿತ್ತು. ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆಯಿಂದ ಕಾಣಿಸಿಕೊಂಡ ರೋಗಲಕ್ಷಣಗಳು ಅಂಗಗಳ ದೌರ್ಬಲ್ಯ ಮತ್ತು ಸಂವೇದನೆಯ ನಷ್ಟ ಎಂದು ಸ್ಪಷ್ಟಪಡಿಸಿದ ನಂತರ ಪ್ರಯೋಗವನ್ನು ಮತ್ತೆ ಶುರು ಮಾಡಲಾಗಿತ್ತು.