ಮಾರ್ಚ್ 24,2020. ಕೊರೊನಾ ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಇಂದಿಗೆ ಲಾಕ್ ಡೌನ್ ಘೋಷಣೆಯಾಗಿ ಒಂದು ವರ್ಷ ಕಳೆದಿದೆ. ಕೊರೊನಾ, ಲಾಕ್ ಡೌನ್ ದೇಶದಲ್ಲಿ ಅನೇಕ ಬದಲಾವಣೆ ತಂದಿದೆ. ಅನೇಕರು ನೌಕರಿ ಕಳೆದುಕೊಂಡಿದ್ದಾರೆ. ದೇಶದಲ್ಲಿ ಆರ್ಥಿಕ ಕುಸಿತವಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ.
ಜನಸಾಮಾನ್ಯರ ಸಮಸ್ಯೆಗೆ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಸ್ಪಂದಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ಅದ್ರ ನಂತ್ರ ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಆರ್ಬಿಐ ಸಾಕಷ್ಟು ನೆರವು ನೀಡಿದೆ.
ಸಾಲಗಾರರಿಗೆ ಆರ್ಬಿಐ ನೆಮ್ಮದಿ ಸುದ್ದಿಯೊಂದನ್ನು ನೀಡಿತ್ತು. ಇಎಂಐ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆರ್‌ಬಿಐ ಮಾರ್ಚ್ 27, 2020 ರಂದು ಸುತ್ತೋಲೆ ಹೊರಡಿಸಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಇಎಂಐ ಮುಂದೂಡುವಂತೆ ಸಾಲ ನೀಡುವ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.
ಸಾಲಗಾರರು ಕೊರೊನಾ ಸಂದರ್ಭದಲ್ಲಿ ಸಾಲದ ಇಎಂಐ ತುಂಬುವ ಅಗತ್ಯವಿರಲಿಲ್ಲ. ಆದ್ರೆ ನಂತ್ರ ಸಾಲಗಾರರು ಇಎಂಐ ಪಾವತಿ ಮಾಡಬೇಕೆಂದು ಆರ್.ಬಿ.ಐ. ಹೇಳಿತ್ತು. ಕೆಲ ಕಂಪನಿಗಳು ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.
ಸಾಲ ಮರುಪಾವತಿ ಅವಧಿಯನ್ನು 6 ತಿಂಗಳು ಹೆಚ್ಚಿಸಬೇಕು ಹಾಗೂ ಬಡ್ಡಿ ಮನ್ನಾ ಮಾಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿತ್ತು. ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಬಡ್ಡಿ ಮನ್ನಾ ಸಾಧ್ಯವಿಲ್ಲ. ಹಾಗೆ ಇದು ಕೇಂದ್ರ ಹಾಗೂ ಆರ್ಬಿಐ ನಿರ್ಧಾರವಾಗಿದ್ದು, ಅದ್ರಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದಿದೆ. ಇದು ಬ್ಯಾಂಕ್ ಗಳಿಗೆ ನೆಮ್ಮದಿ ನೀಡಿದ್ದು, ಸಾಲ ಪಡೆದವರು ಸಾಲದ ಮೇಲಿನ ಚಕ್ರಬಡ್ಡಿ ಪಾವತಿಸಬೇಕಾಗಿದೆ.
ಕೊರೊನಾ ಸಂದರ್ಭದಲ್ಲಿ ಸರ್ಕಾರ ಆತ್ಮನಿರ್ಭರ್ ಭಾರತದ ಘೋಷಣೆ ಮಾಡಿತ್ತು. ಅದ್ರಲ್ಲಿ ಅನೇಕ ಕ್ರಮಗಳನ್ನು ಘೋಷಿಸಿದೆ. ಕೊರೊನಾ ಎದುರಿಸಲು ಕೇಂದ್ರ ಹಾಗೂ ಆರ್ಬಿಐ ನವೆಂಬರ್‌ನಲ್ಲಿ ಒಟ್ಟು 9.87 ಲಕ್ಷ ಕೋಟಿ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಇದು ರಾಷ್ಟ್ರೀಯ ಜಿಡಿಪಿಯ ಶೇಕಡಾ 15ರಷ್ಟಾಗಿದೆ.
ಸಾಂಕ್ರಾಮಿಕ ರೋಗದ ಕಾರಣ ಇಪಿಎಫ್ ಮತ್ತು ಎಂಪಿ ಕಾಯ್ದೆ 1952 ರ ಅಡಿಯಲ್ಲಿ ಬರುವ ಉದ್ಯೋಗದಾತರು ಮತ್ತು ಸಂಸ್ಥೆಗಳ ಉದ್ಯೋಗಿಗಳಿಗೆ ಪರಿಹಾರ ನೀಡಿತ್ತು. ಕಾಲಕಾಲಕ್ಕೆ ವಿವಿಧ ಕ್ರಮಗಳನ್ನು ಘೋಷಿಸಲಾಗಿತ್ತು. ಇಪಿಎಫ್ ಮತ್ತು ಎಂಪಿ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ವರ್ಗದ ಸಂಸ್ಥೆಗಳಿಗೆ ಪಿಎಫ್ ಕೊಡುಗೆಯ ಶಾಸನಬದ್ಧ ದರವನ್ನು ಮೇ.2020, ಜೂನ್ 2020 ಮತ್ತು ಜುಲೈ 2020 ಕ್ಕೆ ಶೇಕಡಾ 12 ರಿಂದ ಶೇಕಡಾ 10ಕ್ಕೆ ಇಳಿಸುವುದಾಗಿ ಸರ್ಕಾರ ಘೋಷಿಸಿತ್ತು. ಇಪಿಎಫ್ ಗೆ ನೀಡುವ ಕೊಡುಗೆ ಕಡಿತವಾದ ಕಾರಣ ನೌಕರರು ಹೆಚ್ಚಿನ ಸಂಬಳವನ್ನು ಮನೆಗೆ ತರುವಂತಾಗಿತ್ತು.