ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ ಕಡಿಮೆಯಾಗುತ್ತಿದೆ.
ಈ ಬಗ್ಗೆ ‘LocalCircles’ ದೇಶಾದ್ಯಂತ 211 ಜಿಲ್ಲೆಗಳ 17,000 ಜನರನ್ನು ಪ್ರಶ್ನಿಸಿ, ಸರ್ವೇಯೊಂದನ್ನು ಮಾಡಿದೆ. ಕೋವಿಡ್-19 ಸೋಂಕಿತರಿಗೆ ಐಸಿಯು ಲಭ್ಯತೆಯ ಕುರಿತಂತೆ ಈ ಸರ್ವೇಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ. ಸರ್ವೆಯಲ್ಲಿ ಭಾಗಿಯಾದ 55% ಮಂದಿ, ತಮ್ಮ ವರ್ತುಲಗಳಲ್ಲಿ ಐಸಿಯು ಬೇಕಾಗಿರುವ ಯಾವುದೇ ಕೋವಿಡ್ ಸೋಂಕಿತ ಇಲ್ಲವೆಂದು ತಿಳಿಸಿದ್ದಾರೆ.
78% ಮಂದಿ, ತಮ್ಮ ಸಂಪರ್ಕಗಳನ್ನು(ಶಿಫಾರಸ್ಸು) ಬಳಸುವ ಮೂಲಕ ಕೋವಿಡ್-19 ಸೋಂಕಿತರಿಗೆ ಐಸಿಯು ದೊರಕುವಂತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದೇ ವೇಳೆ, ಏಳು ಪ್ರತಿಶತದಷ್ಟು ಮಂದಿ, ಐಸಿಯು ಬೆಡ್ ಸಿಗಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಡಬೇಕಾಗಿ ಬಂದಿದೆ ಎಂದಿದ್ದಾರೆ.
ಕೇವಲ ನಾಲ್ಕು ಪ್ರತಿಶತ ಮಂದಿ ಮಾತ್ರವೇ ಮೇಲ್ಕಂಡ ಯಾವುದೇ ಕೆಲಸ ಮಾಡದೇ ಕೋವಿಡ್-19 ರೋಗಿಗೆ ಐಸಿಯು ಸಿಕ್ಕಿದೆ ಎಂದಿದ್ದಾರೆ.
ಐಸಿಯುಗಳ ಕೊರತೆಯ ನಡುವೆ, ಎಲ್ಲಾ ಆಸ್ಪತ್ರೆಗಳ ಬಾಗಿಲುಗಳ ಬಳಿ ಹಾಗೂ ಜಾಲತಾಣಗಳಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಕೋವಿಡ್-19 ಪ್ರಕರಣಕ್ಕೆ ಐಸಿಯು ಲಭ್ಯವಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡಬೇಕೆಂಬ ಸಲಹೆ ಕೊಟ್ಟಿದ್ದಾರೆ.
ಯಾವುದೇ ಶಿಫಾರಸು ಇಲ್ಲದ, ಹಣ ಕೂಡ ಹೊಂದಿಸಲು ಸಾಧ್ಯವಾಗದ ಬಡಬಗ್ಗರು ತಮ್ಮವರಿಗೆ ಕೊರೊನಾ ಸೋಂಕು ಉಲ್ಬಣವಾದ ವೇಳೆ ಏನು ಮಾಡಬೇಕು ಎಂಬ ಪ್ರಶ್ನೆ ಈಗ ಎದ್ದಿದೆ.