36 ವರ್ಷಗಳ ಹಿಂದೆ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ವಿಷಯುಕ್ತ ಮೀಥೈಲ್ ಐಸೋ ಸಯನೈಡ್ ಲೀಕ್ ಆಗಿ ತನ್ನ ತಾಯಿ ರಕ್ತ ವಾಂತಿ ಮಾಡಿಕೊಳ್ಳುವುದನ್ನು ಅಸಹಾಯಕನಾಗಿ ನೋಡುತ್ತಿದ್ದ ಮೊಹಮ್ಮದ್ ಶಫೀಕ್‌ಗೆ ಆಗ ಎಂಟು ವರ್ಷ.
ಕಳೆದ ಎಂಟು ವರ್ಷಗಳಿಂದ ಕಿಡ್ನಿಯ ಸಮಸ್ಯೆಯಿಂದ (ಕ್ರಾನಿಕ್) ಬಂದು ಪರದಾಡುತ್ತಿರುವ ಶಫೀಕ್ ನಿರಂತರ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ಪ್ರತಿ ವಾರವೂ ಎರಡು ಬಾರಿ ಡಯಾಲಿಸಿಸ್ ಅನ್ನು ಮಾಡಿಸಿಕೊಳ್ಳುತ್ತಲೇ ಬಂದಿದ್ದಾರೆ.
ಕಳೆದ ತಿಂಗಳು ಎಂದಿನಂತೆ ಡಯಾಲಿಸಿಸ್‌ಗೆಂದು ತೆರಳಿದ್ದ ಶಫೀಕ್ ದೇಹದಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಅವರ ಡಯಾಲಿಸಿಸ್ ಮಾಡಲು ಆಸ್ಪತ್ರೆ ನಿರಾಕರಿಸಿದೆ. ಡಯಾಲಿಸಿಸ್ ತಡವಾದ ಕಾರಣ ಶಫೀಕ್‌ರ ಇಡಿಯ ದೇಹ ಊದಿಕೊಂಡಿದ್ದು, ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂತು.
ಕಳೆದ ವಾರ ರೌರ್ಕೆಲಾದಲ್ಲಿ ಸಂಭವಿಸಿದ ವಿಷಾನೀಲ ಸೋರಿಕೆಯಿಂದ ನಾಲ್ವರು ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ, ರಾಸಾಯನಿಕಗಳ ಕಾರ್ಖಾನೆಗಳು ಅದೆಷ್ಟರ ಮಟ್ಟಿಗೆ ಸುರಕ್ಷೆಯ ಮಾನದಂಡಗಳನ್ನು ಪಾಲಿಸುತ್ತಿವೆ ಎಂಬ ಪ್ರಶ್ನೆಗಳು ಮತ್ತೊಮ್ಮೆ ಎದ್ದಿವೆ.
ಡಿಸೆಂಬರ್ 03, 1984ರಂದು ಭೋಪಾಲ್‌ನ ಯುಸಿಐಎಲ್ ಘಟಕದಲ್ಲಿ 35-40 ಟನ್‌ಗಳಷ್ಟು ಮೀಥೈಲ್ ಐಸೋಸಯನೈಡ್ ಸೋರಿಕೆಯಾಗಿ, ಕಾರ್ಖಾನೆ ಸುತ್ತಲಿನ 40 ಚದರ ಕಿಮೀ ವ್ಯಾಪ್ತಿಯ ಪ್ರದೇಶದ ಗಾಳಿಯು ವಿಷಯುಕ್ತವಾಗಿತ್ತು. ಪರಿಣಾಮ 3,700ಕ್ಕೂ ಅಧಿಕ ಮಂದಿ ಮೃತಪಟ್ಟು, ಆರು ಲಕ್ಷ ಮಂದಿಗೆ ಜೀವನಪರ್ಯಂತ ಸಂಕಟ ಅನುಭವಿಸುವಂತೆ ಆಗಿದೆ.
ಶಫೀಕ್‌ರಂತೆಯೇ ಇನ್ನೂ ಸಾವಿರಾರು ಮಂದಿ ಈ ವಿಷಾನೀಲದ ಹೊಡೆತದಿಂದ ಇನ್ನೂ ಹೊರಬರಲಾರದೇ ಪರದಾಡುತ್ತಿದ್ದಾರೆ.