ಅಗೆಯುವ ಕೆಲಸದ ವೇಳೆ ಐತಿಹಾಸಿಕ ನಾಣ್ಯಗಳಿರುವ ಭಾರೀ ನಿಧಿಯೊಂದು ಪುಣೆ ಬಳಿಯ ಪಿಂಪ್ರಿ-ಚಿಂಚ್ವಾಡ ಪ್ರದೇಶದ ಚಿಖ್ಲಿ ಪ್ರದೇಶದಲ್ಲಿ ಸಿಕ್ಕಿದೆ. ಒಟ್ಟಾರೆ 216 ನಾಣ್ಯಗಳಿರುವ ಈ ನಿಧಿಯನ್ನು ಅವಳಿ ನಗರದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಣ್ಯಗಳು ಒಟ್ಟಾರೆ 2,357 ಗ್ರಾಂ ತೂಕವಿದ್ದು, ಜೊತೆಗೆ 525 ಗ್ರಾಂನ ಹಿತ್ತಾಳೆಯ ಕಂಟೇನರ್ ಕೂಡ ಸಿಕ್ಕಿದೆ. ಈ ನಾಣ್ಯಗಳು 1720-1750ರ ಕಾಲಘಟ್ಟಕ್ಕೆ ಸೇರಿವೆ ಎಂದು ಅಂದಾಜಿಸಲಾಗಿದೆ. ಉರ್ದು ಹಾಗೂ ಅರೇಬಿಕ್‌ನಲ್ಲಿ ಬರೆಯಲಾದ ಈ ನಾಣ್ಯಗಳ ಮೇಲೆ ರಾಜಾ ಮೊಹಮ್ಮದ್ ಶಾ ಸೀಲ್ ಮೊಹರು ಇರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ತಿಳಿಸಿದ್ದಾರೆ.
ಪ್ರತಿಯೊಂದು ನಾಣ್ಯದ ಮೌಲ್ಯವು 60,000-70,000 ರೂ.ಗಳಷ್ಟಿದೆ ಎಂಧು ಪೊಲೀಸರು ತಿಳಿಸಿದ್ದು, ನಾಣ್ಯಗಳ ಒಟ್ಟಾರೆ ಮೌಲ್ಯವು 1.3 ಕೋಟಿ ರೂ.ಗಳಷ್ಟಿದೆ ಎನ್ನಲಾಗಿದೆ.
ಸೋಮವಾರದಂದು ಕ್ರಿಮಿನಲ್‌ಗಳ ಚೆಕಿಂಗ್ ಮಾಡುವ ವೇಳೆ ಸದ್ದಾಮ್ ಸಲಾರ್ ಖಾನ್ ಎಂಬಾತ ತನ್ನ ಮನೆಯಲ್ಲಿ ಈ ಐತಿಹಾಸಿಕ ನಾಣ್ಯಗಳನ್ನು ಅಕ್ರಮವಾಗಿ ಇಟ್ಟಿದ್ದಾನೆ ಎಂಬ ಸುಳಿವಿನ ಮೇಲೆ ರೇಡ್ ಮಾಡಿದ ಪೊಲೀಸರಿಗೆ ಈ ನಿಧಿ ಸಿಕ್ಕಿದೆ.
ಐದು ಅಡಿ ಉದ್ದದ ಈ ಥಾಲಿಯಲ್ಲಿದೆ ಧೋನಿ ಖಿಚಡಿ, ಕೊಹ್ಲಿ ಖಮನ್…!
ಚಿಖ್ಲಿಯ ನಿರ್ಮಾಣ ಕೆಲಸದ ಜಾಗವೊಂದರ ಬಳಿ ಅಗೆಯುವ ಕೆಲಸ ಮಾಡುವ ಸಂದರ್ಭದಲ್ಲಿ ಸಲಾರ್ ಖಾನ್ ಹಾಗೂ ಆತನ ಮಾವನಿಗೆ ಒಂದಷ್ಟು ನಾಣ್ಯಗಳು ಸಿಕ್ಕಿವೆ. ಇನ್ನಷ್ಟು ಆಳವಾಗಿ ಅಗೆದ ಬಳಿಕ ಸಿಕ್ಕ ನಿಧಿಯನ್ನೆಲ್ಲಾ ಆತ ತನ್ನ ಮನೆಗೆ ಹೊತ್ತುಕೊಂಡು ಹೋಗಿದ್ದ ಎಂದು ಡಿಸಿಪಿ ಸುಧೀರ್ ಹಿರೇಮಠ್ ತಿಳಿಸಿದ್ದಾರೆ. ಸಲಾರ್ ಹಾಗೂ ಆತನ ಮಾವನ ನಡುವೆ ನಿಧಿ ಹಂಚಿಕೆ ಸಂಬಂಧ ವೈಮನಸ್ಯ ಉಂಟಾದ ಕಾರಣ ಈ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ನಾಣ್ಯಗಳನ್ನು ಪ್ರಾಚ್ಯ ವಸ್ತು ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಹಾಗೂ ಮುಂದಿನ ಕ್ರಮವನ್ನು ಇಲಾಖೆಯ ವರದಿ ಆಧರಿಸಿ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.