ಮಹಾನಗರಗಳಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ತವರುಗಳಿಗೆ ದೊಡ್ಡ ಪ್ರಮಾಣದಲ್ಲಿ ಹಿಂದಿರುಗಿದ್ದಾರೆ. 2020 ಮಾರ್ಚ್ ನಿಂದ ಜೂನ್ ವರೆಗಿನ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕಾರ್ಯ ಸ್ಥಳದಿಂದ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಳಾಂತರಿಸಲಾಗಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕಾಲ್ನಡಿಗೆಯಲ್ಲಿ ಪ್ರಯಾಣಿಸಿದವರು ಸೇರಿದಂತೆ ಒಟ್ಟಾರೆ ಒಂದು ಕೋಟಿ ಆರು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಮಾರ್ಚ್ ನಿಂದ ಜೂನ್ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 81 ಸಾವಿರಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು, 29,415 ಸಾವು ಸಂಭವಿಸಿದೆ. ಲಾಕ್ಡೌನ್ ಸಂದರ್ಭಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಸಚಿವಾಲಯವು ಪ್ರತ್ಯೇಕ ಡೇಟಾ ನಿರ್ವಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.