ಪಾಟ್ನಾ: ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮೇಲೆ ಚುನಾವಣಾ ಪ್ರಚಾರ ಸಭೆಯ ವೇಳೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಪಾಟ್ನಾದಿಂದ 125 ಕಿಮೀ ದೂರದ ಔರಂಗಾಬಾದ್ ಜಿಲ್ಲೆಯ ಕುತುಂಬಾ ಕ್ಷೇತ್ರದ ಆರ್.ಜೆ.ಡಿ. ಅಭ್ಯರ್ಥಿ ಪರವಾಗಿ ಅವರು ಮತ ಯಾಚನೆಗೆ ತೆರಳಿದ್ದರು.
ವೇದಿಕೆ ಮೇಲೆ ಕುಳಿತಿದ್ದ ಅವರ ತೊಡೆಯ ಮೇಲೆ ನೇರವಾಗಿ ಚಪ್ಪಲಿ ಬಂದು ಬಿದ್ದಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಅದನ್ನು ನೋಡುತ್ತಿದ್ದಂತೆ ಸೇರಿದ್ದ ಅಭಿಮಾನಿಗಳು ಅವರ ಪರ ಘೋಷಣೆ ಕೂಗಿದ್ದಾರೆ. ಆದರೆ, ಘಟನೆಯನ್ನು ತೇಜಸ್ವಿ ಗಂಭೀರವಾಗಿ ತೆಗೆದುಕೊಂಡಿಲ್ಲ. ತಮ್ಮ ಭಾಷಣದಲ್ಲಿಯೂ ಆ ವಿಷಯ ಪ್ರಸ್ತಾಪ ಮಾಡದೇ ಅಚ್ಚರಿ ಮೂಡಿಸಿದರು.
ಬಿಹಾರ ವಿಧಾನ ಸಭೆಗೆ ಚುನಾವಣೆ ನಡೆಯುತ್ತಿದ್ದು, ಅ.28, ನ. 3 ಹಾಗೂ 7 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರ ಬೀಳಲಿದೆ. 2017 ರಲ್ಲಿ ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿದ್ದ ತೇಜಸ್ವಿ ಬಿಡುಗಡೆಯ ನಂತರ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.