ಆರ್ ಟಿ ಐ ಅಡಿ ಮಾಹಿತಿಗಳನ್ನು ನೀಡದ ಅಧಿಕಾರಿಗಳಿಗೆ ಮನೆಕಡೆ ಬಾಗಿಲು ತೋರಿಸಬೇಕಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಈ ಸಂಬಂಧ ಎಲ್ಲ ಇಲಾಖೆಗಳು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ನಿಗಮಗಳಿಗೆ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಆರ್ ಟಿ ಐ ಅಡಿ ದಾಖಲೆ ನೀಡಲು ಹಿಂದೇಟು ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಸರ್ಕಾರಕ್ಕೆ ಇಂಥದ್ದೊಂದು ನಿರ್ದೇಶನ ನೀಡಿದೆ. ಜತೆಗೆ ಸಂಬಂಧಪಟ್ಟ ಅರ್ಜಿ ಕುರಿತು ಒಂದು ತಿಂಗಳೊಳಗೆ ಮಾಹಿತಿ ನೀಡಬೇಕೆಂದು ಸೂಚಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಕಚೇರಿ ಕೂಡ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ, ನ್ಯಾಯಾಂಗ ಸ್ವಾತಂತ್ರ್ಯ ಅವಕಾಶ ಇದ್ದರೂ ಪಾರದರ್ಶಕತೆ ಇರಬೇಕೆಂದು ನ್ಯಾಯಾಂಗ ಬಯಸುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಸುಪ್ರಿಂನ ಹಲವು ತೀರ್ಪನ್ನು ಉಲ್ಲೇಖಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಂತೆ ನಡೆದುಕೊಳ್ಳದ ಅಧಿಕಾರಿಗಳಿಗೆ ಪಾಠ ಕಲಿಸಬೇಕು ಮತ್ತು ನಮ್ಮ ದೃಷ್ಟಿಯಲ್ಲಿ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿ ಹುದ್ದೆಯನ್ನು ಅಲಂಕರಿಸಲು ಅನರ್ಹರು, ಅವರನ್ನು ಬಾಗಿಲು ಕಡೆ ದಾರಿ ತೋರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಖಾರವಾಗಿ ಪ್ರತಿಕ್ರಿಯಿಸಿದೆ.