ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ತನ್ನ ಮಗನ ಬರ್ತಡೇ ಪಾರ್ಟಿ ಮಾಡಿದ ತಾಯಿ ಇದೀಗ 17 ಮಂದಿಗೆ ವೈರಸ್ ಹರಡಿಸಿ, ಆತಂಕ ಸೃಷ್ಟಿಸಿದ್ದಾರೆ.
ಈ ಘಟನೆ ನಡೆದಿರುವುದು ಒಡಿಶಾದಲ್ಲಿ. ಜೂನ್ 6 ರಂದು ತನ್ನ ಪತಿ ಮತ್ತು ಮಗನೊಂದಿಗೆ ಗುರು ಗ್ರಾಮದಿಂದ ಒಡಿಶಾಕ್ಕೆ ಆಗಮಿಸಿದ್ದಾಕೆ ಸರ್ಕಾರದ ನಿಯಮದ ಪ್ರಕಾರ 14ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕಾಗಿತ್ತು. ಆದರೆ ತನ್ನ ಅಂಕಲ್ ಮನೆಯಲ್ಲಿದ್ದ ಮಹಿಳೆ, ನಿಯಮ ಅನುಸರಿಸಿಲ್ಲ.
ಇಷ್ಟೇ ಅಲ್ಲದೆ ಆಕೆ ತನ್ನ ಮಗನ ಹುಟ್ಟು ಹಬ್ಬವನ್ನು ಆಚರಿಸಿ ನೆರೆಹೊರೆಯವರಿಗೆ ಪಾರ್ಟಿಗೆ ಕರೆದಿದ್ದರು. ಜೂನ್ 15ರಂದು ಆಕೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಹಾಗೆಯೇ ಪಾರ್ಟಿಗೆ ಬಂದವರನ್ನೆಲ್ಲ ಪರೀಕ್ಷೆಗೊಳಪಡಿಸಿದಾಗ ಹದಿನೇಳು ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಅಧಿಕಾರಿಗಳು ಇಡೀ ಪ್ರದೇಶವನ್ನೇ ಸೀಲ್ ಡೌನ್ ಮಾಡಿದ್ದಾರೆ.
ಈ ಪಾರ್ಟಿಯಲ್ಲಿ ಪಾಲ್ಗೊಂಡವರ ಪೈಕಿ ಕೆಲವರು ಇನ್ನೊಂದು ವಿವಾಹ ವಾರ್ಷಿಕೋತ್ಸವ ಪಾರ್ಟಿಯಲ್ಲೂ ಭಾಗಿಯಾಗಿದ್ದಾರೆ. ಇದೀಗ ಸಂಪರ್ಕ ಪತ್ತೆಹಚ್ಚುವುದು ಅಧಿಕಾರಿಗಳಿಗೆ ಸವಾಲಾಗಿದೆ. ನಿಯಮವನ್ನು ಉಲ್ಲಂಘಿಸಿ ಬರ್ತಡೆ ಪಾರ್ಟಿ ಮತ್ತು ವಿವಾಹ ವಾರ್ಷಿಕೋತ್ಸವ ಪಾರ್ಟಿ ಮಾಡಿದ ಎರಡು ಕುಟುಂಬದ ವಿರುದ್ಧ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ.