ಓಡಿಶಾದ ಬದಂಬಾ ಬ್ಲಾಕ್ನಲ್ಲಿ ಬುಧವಾರ ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ವಯಸ್ಕ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ತಲಚಂದ್ರಗಿರಿ ಸಂರಕ್ಷಿತ ಅರಣ್ಯ ಪ್ರದೇಶ ಗೋಪಾಲಪುರದಲ್ಲಿ ಬಿಟ್ಟಿದ್ದಾರೆ.
ಸ್ಥಳೀಯರು ಈ ದೈತ್ಯ ಹಾವನ್ನ ನೋಡುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾವನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ, ಕಾಳಿಂಗಸರ್ಪವನ್ನ ನೋಡುತ್ತಿದ್ದಂತೆಯೇ ಸ್ಥಳೀಯರು ನಮಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆತೆರಳಿದ ನಮ್ಮ ಟೀಂ ಈ ರಕ್ಷಣಾ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿದೆ. 14 ಅಡಿ ಉದ್ಧದ ಈ ಹಾವು 6.6 ಕೆಜಿ ತೂಕ ಹೊಂದಿತ್ತು ಎಂದು ಹೇಳಿದ್ದಾರೆ.
ಆಗ್ನೇಯ ಏಷ್ಯಾ ದೇಶಗಳಲ್ಲಿ ಕಾಣಸಿಗುವ ವಿಷಪೂರಿತ ಹಾವುಗಳಲ್ಲಿ ಕಾಳಿಂಗ ಸರ್ಪ ಕೂಡ ಒಂದು. ಮಾರಣಾಂತಿಕ ವಿಷವನ್ನ ಹೊಂದಿರುವ ಈ ಹಾವುಗಳು ಕಚ್ಚಿದ್ರೆ ಮೆದುಳಿಗೆ ಆಮ್ಲಜನಕ ಪೂರೈಕೆ ಬಂದ್ ಆಗಬಹುದು ಹಾಗೂ ಹೃದಯ ಸ್ಥಂಭನ ಮತ್ತು ಉಸಿರಾಟ ವೈಫಲ್ಯದಿಂದ ವ್ಯಕ್ತಿ ಸಾವನ್ನಪ್ಪಬಹುದು.