
ಭುವನೇಶ್ವರ್: ‘ಸುಮಂಗಲ’ ಹೆಸರಿನ ಯೋಜನೆಯಡಿ ಅಂತರ್ಜಾತಿ ವಿವಾಹವಾದವರಿಗೆ 2.5 ಲಕ್ಷ ರೂಪಾಯಿ ನೀಡಲಾಗುವುದು.
ಒಡಿಶಾ ಸಿಎಂ ನವೀನ್ ಪಟ್ನಾಯಕ್ ‘ಸುಮಂಗಲ’ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ. ಅಂತರ್ಜಾತಿ ಮದುವೆಯಾಗುವ ದಂಪತಿಗೆ ಎರಡೂವರೆ ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಹಿಂದೂ ಧರ್ಮದ ವಧು/ವರ, ಪರಿಶಿಷ್ಟ ಜಾತಿಯವರ ವಧು/ವರನನ್ನು ಮದುವೆಯಾದರೆ ಅವರಿಗೆ ಪ್ರೋತ್ಸಾಹಧನ ಸಿಗಲಿದೆ. ಅನೇಕ ವರ್ಷಗಳಿಂದ ಯೋಜನೆ ಜಾರಿಯಲ್ಲಿದ್ದು ಈ ಮೊದಲು 50 ಸಾವಿರ ರೂ. ನೀಡಲಾಗುತ್ತಿತ್ತು. 2017 ರಲ್ಲಿ ಪ್ರೋತ್ಸಾಹಧನದ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು ಈಗ ಅದನ್ನು 2.5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಮದುವೆಯಾದ 60 ದಿನದ ಒಳಗೆ ದಂಪತಿ ಖಾತೆಗೆ ಪ್ರೋತ್ಸಾಹಧನ ಜಮಾ ಮಾಡಲಾಗುತ್ತದೆ. ಮೊದಲನೇ ಮದುವೆಯಾದವರಿಗೆ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿದೆ. ವಧು ವಿಧವೆಯಾಗಿದ್ದರೆ ಅಥವಾ ವರ ವಿಧುರನಾಗಿದ್ದರೆ ಅಂತಹ ದಂಪತಿಗೂ ಪ್ರೋತ್ಸಾಹ ಧನ ಪಡೆಯಲು ಅವಕಾಶವಿದೆ ಎಂದು ಹೇಳಲಾಗಿದೆ.