ಯಾಸ್ ಚಂಡಮಾರುತದ ರಕ್ಷಣಾ ಕಾರ್ಯದ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರಗೈದ ಆಪಾದನೆ ಮೇಲೆ ಒಡಿಶಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ಬಾಲಾಸೋರ್ ಜಿಲ್ಲೆಯ ಗೋಪಾಲ್ಪಪುರ ಪ್ರದೇಶದಲ್ಲಿ ಯಾಸ್ ಚಂಡಮಾರುತದ ಡ್ಯೂಟಿಯಲ್ಲಿದ್ದ ವೇಳೆ ತನ್ನೊಂದಿಗೆ ಈ ಅಧಿಕಾರಿ ಅನುಚಿತವಾಗಿ ವರ್ತಿಸಿರುವುದಾಗಿ ಮಹಿಳಾ ಪೇದೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಬಂಧಿಸಲಾಗಿದೆ. ಆರೋಪಿ ಬನ್ಸಿದಾರ್ ಪ್ರದಾನ್‌ರನ್ನು ಗೋಪಾಲ್ಪುರ ಪ್ರದೇಶದಲ್ಲಿ ಪೋಸ್ಟಿಂಗ್ ಮಾಡಲಾಗಿತ್ತು. ಅಪರಾಧ ನಡೆದಿದೆ ಎನ್ನಲಾದ ಪ್ರದೇಶದ ಔಟ್‌ಪೋಸ್ಟ್‌ನ ಇನ್-ಚಾರ್ಜ್‌ನಲ್ಲಿ ಈ ಅಧಿಕಾರಿ ಇದ್ದರು.
ಆರಂಭದಲ್ಲಿ ತನ್ನ ದೂರನ್ನು ದಾಖಲಿಸಿಕೊಳ್ಳಲು ಇಲಾಖೆ ಹಿಂದೇಟು ಹಾಕಿದ ಬಳಿಕ ಸಂತ್ರಸ್ತೆ ರೈಲು ಹಳಿಯ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಆಕೆಯನ್ನು ರಕ್ಷಿಸಿದ ರೈಲ್ವೇ ಪೊಲೀಸರು ರಾಜ್ಯ ಪೊಲೀಸ್‌ನ ಪೂರ್ವ ವಿಭಾಗದ ಐಜಿಗೆ ವಿಚಾರ ತಲುಪಿಸಿದ್ದರು.
ಐಜಿ (ಪೂರ್ವ ವಲಯ) ದೀಪ್ತೇಶ್ ಪಟ್ನಾಯಿಕ್ ಈ ಸಂಬಂಧ ನಿರ್ದೇಶನ ಕೊಟ್ಟು, ಬನ್ಸಿದಾರ್ ಪ್ರದಾನ್ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ಕೊಟ್ಟ ಬಳಿಕ ಆಪಾದಿತನನ್ನು ಬಾಲಾಸೋರ್ ಠಾಣೆಗೆ ಕರೆಯಿಸಿ ಬಂಧಿಸಲಾಗಿದೆ.
ಆಪಾದಿತನ ವಿರುದ್ಧ ಅತ್ಯಾಚಾರ, ಹಲ್ಲೆ ಹಾಗೂ ದುರುದ್ದೇಶಪೂರಿತ ವರ್ತನೆಗಳ ಆರೋಪದ ಮೇಲೆ ಪ್ರಕರಣ ದಾಖಲಿಸಿ ಆತನ ವೈದ್ಯಕೀಯ ಪರೀಕ್ಷೆ ಮಾಡಿ ಸ್ಥಳೀಯ ನ್ಯಾಯಾಲದಲ್ಲಿ ಹಾಜರುಪಡಿಸಲಾಗಿದೆ ಎಂದು ಬಾಲಾಸೋರ್ ಟೌನ್ ಪೊಲೀಸ್ ಠಾಣೆಯ ಇನ್-ಚಾರ್ಜ್ ಸುಭ್ರಾಂಶು ಶೇಖರ್ ನಾಯಕ್ ತಿಳಿಸಿದ್ದಾರೆ.