ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶ ಪ್ರವಾಸ ಮಾಡುವ ಪ್ರಯಾಣಿಕರಿಗೆ ಕೊರೊನಾ ವೈರಸ್ ಪರೀಕ್ಷೆ ಸೌಲಭ್ಯ ನೀಡಲಾಗ್ತಿದೆ. ಟರ್ಮಿನಲ್ -3 ಕಾರ್ ಪಾರ್ಕಿಂಗ್‌ನಲ್ಲಿ ಸೆಪ್ಟೆಂಬರ್ 12 ರಂದು ಈ ಸೌಲಭ್ಯವನ್ನು ಪ್ರಾರಂಭಿಸಲಾಯಿತು. ಈಗ ದೇಶೀಯ ಪ್ರಯಾಣಿಕರಿಗೂ ಈ ಸೌಲಭ್ಯವನ್ನು ನೀಡಲಾಗ್ತಿದೆ. ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮತ್ತು ಜೆನೆಸ್ಟ್ರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಟರ್ಮಿನಲ್ – 3 ನ ಗೇಟ್ ನಂ 8 ರ ಮುಂದೆ ಪರೀಕ್ಷಾ ಸೌಲಭ್ಯದ ವ್ಯವಸ್ಥೆ ಮಾಡಿದೆ.
ದೇಶೀಯ ಅಥವಾ ಅಂತರರಾಷ್ಟ್ರೀಯ ಪ್ರಯಾಣಿಕರು ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಮಾಡಿಸಬಹುದು. ಈ ಕೋವಿಡ್ – 19 ಪರೀಕ್ಷಾ ಕೇಂದ್ರ ದೆಹಲಿ ಸರ್ಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಿಡಿಯುವ ಮೊದಲು ಕೊರೊನಾ ಪರೀಕ್ಷೆ ಮಾಡಿಕೊಳ್ಳಲು ಬಯಸುವ ಪ್ರಯಾಣಿಕರು 6 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪರೀಕ್ಷಾ ವರದಿ 4 ರಿಂದ 6 ಗಂಟೆಗಳಲ್ಲಿ ಬರಲಿದೆ.
ವಿಮಾನ ನಿಲ್ದಾಣ ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಪ್ರಯಾಣಿಕರು 2400 ರೂಪಾಯಿ ಪಾವತಿಸಬೇಕು. ಮಾದರಿ ಸಂಗ್ರಹಕ್ಕಾಗಿ ಲ್ಯಾಬ್ ರಚಿಸಲಾಗಿದೆ. ಶೀಘ್ರದಲ್ಲೇ ಎರಡನೇ ಲ್ಯಾಬ್ ಶುರು ಮಾಡಲಾಗುವುದು. ಈ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಒಂದು ಗಂಟೆಯಲ್ಲಿ 40 ರಿಂದ 50 ಜನರು ಕೌಂಟರ್‌ನಲ್ಲಿ ಹೆಸರು ನೋಂದಾಯಿಸಬಹುದು.