ಲವ್ ಜಿಹಾದ್ ಕಾನೂನು ಜಾರಿ ವಿರುದ್ಧವಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಮಾನ್ಯವಲ್ಲವೆಂದು ಅಲಹಾಬಾದ್ ಹೈಕೋರ್ಟ್ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ವಿಭಾಗಿಯ ಪೀಠ ರದ್ದುಪಡಿಸಿದೆ.
ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಮತಾಂತರದ ವಿರುದ್ಧ ಕಾನೂನು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಅಲಹಾಬಾದ್ ಹೈಕೋರ್ಟ್ ತನ್ನ ಹಿಂದಿನ ತೀರ್ಪನ್ನು ತಳ್ಳಿಹಾಕಿದ್ದು, ಮದುವೆಯ ಉದ್ದೇಶಕ್ಕಾಗಿ ಮತಾಂತರ ಸರಿಯಲ್ಲ ಎಂಬ ತೀರ್ಪನ್ನು ತಳ್ಳಿಹಾಕಿದೆ.
ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿದ್ದು, ಇದೇ ಮಾದರಿಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಾದ ಹರಿಯಾಣ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ಚರ್ಚೆ ನಡೆದಿದೆ.
ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಈ ಬಗ್ಗೆ ಮಾತನಾಡಿ, ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ವಯಸ್ಕರು ಸ್ವಾತಂತ್ರ್ಯ ಹೊಂದಿದ್ದಾರೆ. ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವ ಹಕ್ಕನ್ನು ಅತಿಕ್ರಮಿಸಲು ಆಗುವುದಿಲ್ಲ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 29 ರಂದು ನ್ಯಾಯಮೂರ್ತಿ ಮಹೇಶ್ ತ್ರಿಪಾಠಿ ಅವರ ನ್ಯಾಯಪೀಠ ಮದುವೆಯ ಉದ್ದೇಶದ ಮತಾಂತರ ಸರಿಯಲ್ಲವೆಂದು ಅಭಿಪ್ರಾಯಪಟ್ಟಿತ್ತು. ಇದಾದ ನಂತರ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಬಿಜೆಪಿ ಆಡಳಿತದ ಅನೇಕ ರಾಜ್ಯಗಳ ನಾಯಕರು ಘೋಷಣೆ ಮಾಡಿದ್ದರು.