ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗ್ತಿದೆ. ಕೊರೊನಾ ಲಕ್ಷಣಗಳು ಭಯ ಹುಟ್ಟಿಸಿವೆ. ಕೊರೊನಾ ಎರಡನೇ ಅಲೆ ಸೂಕ್ಷ್ಮ ಬದಲಾವಣೆ ಹೊಂದಿದೆ. ಇದ್ರ ಪ್ರಸರಣದ ದರ ಹೆಚ್ಚಾಗಿದೆ ಎಂದು ಕೋಲ್ಕತ್ತಾ ವೈದ್ಯರು ಹೇಳಿದ್ದಾರೆ. ಮೊದಲ ಅಲೆಯಲ್ಲಿ ಜ್ವರ, ಕಫ ಮತ್ತು ಕೆಮ್ಮು ಕೊರೊನಾದ ಸಾಮಾನ್ಯ ಲಕ್ಷಣವಾಗಿತ್ತು. ಆದ್ರೆ ಈ ಬಾರಿ ಸುಸ್ತು, ನೋವು ಹಾಗೂ ಅತಿಸಾರ ಹೆಚ್ಚಾಗಿ ಕಂಡು ಬರ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಯುವ ಜನತೆಗೆ ಶ್ವಾಸಕೋಶೇತರ ಲಕ್ಷಣ ಕಾಡ್ತಿದೆಯಂತೆ. ಕಡಿಮೆ ಮೃತ್ಯು ದರದ ಜೊತೆ ಈ ಬಾರಿ ವೈರಸ್ ವೇಗವಾಗಿ ಹರಡುತ್ತಿದೆ. ಕಳೆದ ಬಾರಿ 59-60 ವರ್ಷ ಮೇಲ್ಪಟ್ಟವರನ್ನು ಹೆಚ್ಚು ಕಾಡಿದ್ದ ವೈರಸ್ ಈ ಬಾರಿ 45ಕ್ಕೆ ಇಳಿದಿದೆ. ಕಡಿಮೆ ವಯಸ್ಸಿನವರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುವ ಕಾರಣ ಅವರ ಶ್ವಾಸಕೋಶಕ್ಕೆ ಹಾನಿ ಮಾಡಲು ವೈರಸ್ ಗೆ ಆಗ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಶ್ವಾಸಕೋಶ ಹೊರತುಪಡಿಸಿ ಉಳಿದ ಭಾಗಗಳ ಮೇಲೆ ಪರಿಣಾಮ ಬೀರುತ್ತಿದೆ. ದಣಿವು, ಆಯಾಸ, ಆಲಸ್ಯ, ದೇಹದ ನೋವು ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ತಿವೆ.
ಜ್ವರ, ಕಫ ಶೇಕಡಾ 10-15 ಮಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಿರುವ ಕಾರಣ ಕೊರೊನಾ ಪತ್ತೆ ಹಚ್ಚುವುದು ಕಷ್ಟವಾಗಿದೆ. ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವು ಮುಂತಾದ ನಿರ್ದಿಷ್ಟವಲ್ಲದ ಲಕ್ಷಣಗಳು ಈ ಬಾರಿ ವ್ಯಾಪಕವಾಗಿ ಹರಡಿವೆ. ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿರುವ ಕಾರಣ ಚೇತರಿಕೆ ಪ್ರಮಾಣ ವೇಗವಾಗಿ ಆಗ್ತಿದೆ. ಆದ್ರೆ ವೈರಸ್ ವೇಗವಾಗಿ ಹರಡುತ್ತಿದೆ.