ವಿಶೇಷ ವಿವಾಹ ಕಾಯಿದೆ ಅಡಿ ಕಾನೂನಾತ್ಮಕವಾಗಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೊಬ್ಬನ ಮದುವೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಲು ಬಂದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ಜರುಗಿದೆ.
ಬಿಜೆಪಿ ಜಿಲ್ಲಾ ಅಧ್ಯಕ್ಷ ಅಜಯ್ ಶರ್ಮಾ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಧರಣಿ ಕುಳಿತಿದ್ದಲ್ಲದೇ, ಯುವತಿಯ ಹೆತ್ತವರ ಮನೆಗೆ ಪ್ರವೇಶಿಸಲು ಯತ್ನಿಸಿದ್ದಾರೆ.
“ಯುವತಿಯ ಮನೆಯವರು ಭಾರೀ ಒತ್ತಡದಲ್ಲಿ ಇದ್ದು, ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಪರಿವರ್ತನೆ ಮಾಡಲಾಗುತ್ತಿದೆ. ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ನಾವು ಇದನ್ನು ವಿರೋಧಿಸುತ್ತೇವೆ. ಈ ಮದುವೆಗೆ ಜಿಲ್ಲಾಡಳಿತದ ಅನುಮತಿಯನ್ನು ಪಡೆದಿಲ್ಲ” ಎಂದು ಶರ್ಮಾ ತಿಳಿಸಿದ್ದಾರೆ.
ಈ ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ಯುವತಿಯ ತಂದೆ, ಮದುವೆಗೆ ಅಗತ್ಯವಿರುವ ಆಡಳಿತಾತ್ಮಕ ಅನುಮತಿ ಪಡೆದಿದ್ದು, ಈ ಕಾರ್ಯಕರ್ತರಿಗೆ ಸುದ್ದಿಯಲ್ಲಿರಲು ಏನಾದರೂ ಒಂದು ಘಟನೆ ಬೇಕಾಗುತ್ತದೆ, ತಾನು ಈ ಆಟದಲ್ಲಿ ಕಾಯಿಯಾಗಿದ್ದೇನೆ ಎಂದು ಆಪಾದನೆ ಮಾಡಿದ್ದಾರೆ.
“ದಂಪತಿಗಳಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ. ಸಪ್ತಪದಿ ತುಳಿದು ವಿವಾಹವಾಗಲೂ ಸಹ ಮದುಮಗ ಸಿದ್ಧನಿದ್ದ, ಆದರೆ ಅದರ ಅಗತ್ಯವೇನೂ ಇಲ್ಲ” ಎಂದು ವಧುವಿನ ತಂದೆ ಹೇಳಿದ್ದಾರೆ.
ಪ್ರತಿಭಟನೆ ಮಾಡಿ, ಪೊಲೀಸರೊಂದಿಗೆ ತಿಕ್ಕಾಟಕ್ಕೆ ಮುಂದಾದ ಆಪಾದನೆ ಮೇಲೆ ಶರ್ಮಾ ಹಾಗೂ 100 ಮಂದಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ.