ಕೊರೊನಾ ಮಹಾಮಾರಿಯಿಂದ ದೇವಸ್ಥಾನಗಳೆಲ್ಲಾ ಬಾಗಿಲು ಹಾಕಿದ್ದವು. ಆದರೆ ಇತ್ತೀಚೆಗೆ ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ದೇವಸ್ಥಾನಗಳ ಬಾಗಿಲು ತೆರೆಯಲಾಗಿದೆ. ಈ ವೈರಸ್ನಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿ ಮನೆಯಲ್ಲಿಯೇ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ಇದೀಗ ಕೊರೊನಾ ಎಫೆಕ್ಟ್ ಗಣೇಶ ಹಬ್ಬಕ್ಕೂ ತಟ್ಟುತ್ತಿದೆ.
ಹೌದು, ಗಣೇಶ ಹಬ್ಬ ಬಂತಂದ್ರೆ ಮುಂಬೈ ನಗರ ಜಗಮಗಿಸುತ್ತಿತ್ತು. ದೊಡ್ಡ ಮಟ್ಟದಲ್ಲಿ ಸಡಗರದಿಂದ ಈ ಹಬ್ಬವನ್ನು ಅಲ್ಲಿನ ಜನತೆ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಹಬ್ಬ ಸಾರ್ವಜನಿಕವಾಗಿ ನಡೆಸದಿರಲು ಬಹುತೇಕರು ತೀರ್ಮಾನ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಗಣೇಶೋತ್ಸವವನ್ನು ನಡೆಸದಿರಲು ಮುಂಬೈನ ಲಾಲ್ ಬಗ್ಚಾ ರಾಜ ಸಮಿತಿ ನಿರ್ಧರಿಸಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣೇಶೋತ್ಸವ ಮಂಡಲ್ ಪ್ರತಿಷ್ಟಾಪನೆ ಮಾಡುತ್ತಿಲ್ಲ. ಗಣೇಶೋತ್ಸವದ ಕೊನೆಯ ದಿನದಂದು ಲಾಲ್ಬಾಗ್ನಿಂದ ಗಿರ್ಗಾಮ್ ಚೌಪಟ್ಟಿಯವರೆಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದರು. ಆದರೆ ಅದೆಲ್ಲದಕ್ಕೂ ಇದೀಗ ತಣ್ಣೀರೆರೆಚಿದಂತಾಗಿದೆ.