ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಮುಸ್ಲಿಂ ವ್ಯಕ್ತಿ ಮತ್ತಾತನ ಸಹೋದರನನ್ನ ಎರಡು ವಾರಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಹಿಂದೂ ಯುವತಿಯನ್ನ ಬಲವಂತವಾಗಿ ಮತಾಂತರ ಮಾಡಿದ ಬಗ್ಗೆ ಯಾವುದೇ ಪ್ರಬಲ ಸಾಕ್ಷ್ಯ ಸಿಗದ ಕಾರಣ ಇಬ್ಬರು ಮುಸ್ಲಿಂ ಸಹೋದರರನ್ನ ಬಿಡುಗಡೆ ಮಾಡಲಾಗಿದೆ.
ಉತ್ತರ ಪ್ರದೇಶ ರಾಜಧಾನಿ ಲಖನೌನಿಂದ 350 ಕಿಲೋಮೀಟರ್ ದೂರದಲ್ಲಿರುವ ಮೊರಾದಬಾದ್ ಕಾಂತಾ ಪ್ರದೇಶದ ಹಿಂದೂ ಯುವತಿ 22 ವರ್ಷದ ಪಿಂಕಿ ಎಂಬಾಕೆಯನ್ನ ಬಲವಂತವಾಗಿ ಮತಾಂತರಗೊಳಿಸಿದ ರಶೀದ್ ಅಲಿ (22) ಮದುವೆಯಾಗಲು ಯತ್ನಿಸಿದ್ದಾನೆ. ಇದಕ್ಕೆ ಆತನ ಸಹೋದರ ಸಲೀಂ ಅಲಿ (25) ಕೂಡ ಸಾಥ್ ನೀಡಿದ್ದಾನೆ ಎಂದು ಪಿಂಕಿ ತಾಯಿ ಆರೋಪಿಸಿದ್ದರು.
ಪ್ರಕರಣ ಸಂಬಂಧ ಮೊರಾದಾಬಾದ್ ಜಿಲ್ಲೆಯ ಕಾಂತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರಿಬ್ಬರು ಬಲವಂತವಾಗಿ ಯುವತಿಯನ್ನ ಮತಾಂತರಗೊಳಿಸಲು ಪ್ರಯತ್ನಿಸಿದ್ದರ ಬಗ್ಗೆ ಯಾವುದೇ ಪುರಾವೆ ಕಂಡುಹಿಡಿಯಲು ಯುಪಿ ಪೊಲೀಸರಿಗೆ ಸಾಧ್ಯವಾಗದ ಕಾರಣ ಮುಸ್ಲಿಂ ಸಹೋದರರನ್ನ ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.