ದೇಶಾದ್ಯಂತ ಇರುವ ಸೇನಾ ಕ್ಯಾಂಟೀನ್ ಗಳಲ್ಲಿ ಭಾರತೀಯ ವಸ್ತುಗಳನ್ನಷ್ಟೇ ಮಾರಾಟ ಮಾಡಬೇಕೆಂಬ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಅಭಿಯಾನ ಘೋಷಿಸಿದ ಹಿನ್ನೆಲೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತದಲ್ಲಿ ತಯಾರಾದ ವಸ್ತುಗಳನ್ನು ಮಾತ್ರ ಸೇನಾ ಕ್ಯಾಂಟೀನ್ ನಲ್ಲಿ ಬಳಸಬೇಕೆಂಬ ಯಾವುದೇ ನಿಯಮ ವಿಧಿಸಿಲ್ಲ. ಅಂತಹ ನಿರ್ಣಯವನ್ನೂ ಮಾಡಿಲ್ಲ ಎಂದರು.
2017-18 ರಲ್ಲಿ ಸೇನಾ ಕ್ಯಾಂಟೀನ್ ಗಳಲ್ಲಿ 17,190 ಕೋಟಿ ರೂ.ಗಳ ವಹಿವಾಟು ನಡೆದಿದ್ದು, 2018-19 ರಲ್ಲಿ 18,917 ಕೋಟಿ ರೂ. ವಹಿವಾಟು ನಡೆದಿತ್ತು.
2019-20 ರಲ್ಲಿ 17,588 ಕೋಟಿ ರೂ. ಮೊತ್ತದ ವಹಿವಾಟು ನಡೆದಿದ್ದರೆ, ಈ ವರ್ಷ ಆಗಸ್ಟ್ ವರೆಗಿನ ಅಂಕಿ-ಅಂಶಗಳ ಪ್ರಕಾರ 3,692 ಕೋಟಿ ರೂ. ವಹಿವಾಟು ನಡೆದಿದೆ.
ದೇಶದಲ್ಲಿ 86 ಸೇನಾ ವಿಮಾನ ನಿಲ್ದಾಣಗಳಿದ್ದು, 37 ನಿಲ್ದಾಣಗಳ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಮತ್ತೊಂದು ಪ್ರಶ್ನೆಗೆ ಸಚಿವ ಶ್ರೀಪಾದ ನಾಯ್ಕ್ ಉತ್ತರಿಸಿದ್ದಾರೆ.