ಲಕ್ನೌ: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರೆದಿದ್ದು, ಉಳಿದೆಡೆ ಲಾಕ್ ಡೌನ್ ಸಡಿಲಗೊಳಿಸಲಾಗಿದೆ. ಈ ನಡುವೆ ಉತ್ತರ ಪ್ರದೇಶದ ಜಿಲ್ಲೆಯೊಂದು ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ.
ಲಸಿಕೆ ಪಡೆದ ಸರ್ಟಿಫಿಕೆಟ್ ತೋರಿಸಿದವರಿಗೆ ಮಾತ್ರ ಮದ್ಯ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಪೂರೈಕೆಯಿಲ್ಲ ಎಂದು ಇಟಾವಷ್ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಬಾರ್ ಮಾಲೀಕರು ಅಂಗಡಿಗಳಿಗೆ ನೋಟೀಸ್ ಅಂಟಿಸಿದ್ದಾರೆ.
ನೋ ವ್ಯಾಕ್ಸಿನೇಷನ್, ನೋ ಲಿಕ್ಕರ್ ಎಂಬ ಬೋರ್ಡ್ ನ್ನು ಅಂಗಡಿ ಮುಂದೆ ಹಾಕಲಾಗಿದೆ. ವ್ಯಾಕ್ಸಿನ್ ಪಡೆದ ಸರ್ಟಿಫಿಕೇಟ್ ತೋರಿಸಿದವರಿಗೆ ಮಾತ್ರ ಮದ್ಯ ನೀಡಲಾಗುತ್ತಿದೆ.
ಅಡಿಶನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹೇಮ್ ಕುಮಾರ್ ಸಿಂಗ್ ಸೂಚನೆ ಮೇರೆಗೆ ಇಂತದ್ದೊಂದು ಕಟ್ಟುನಿಟ್ಟಿನ ಆದೇಶ ಪಾಲಿಸಲಾಗುತ್ತಿದೆ. ಇತ್ತೀಚೆಗಷ್ಟೇ ಅಲಿಘರ್ ನಲ್ಲಿ 25 ಜನ ಮದ್ಯ ಸೇವಿಸಿ ಸಾವನ್ನಪ್ಪಿದ್ದ ದುರಂತದ ಬೆನ್ನಲ್ಲೇ ಹೇಮ್ ಕುಮಾರ್ ಸಿಂಗ್ ಜಿಲ್ಲೆಯಲ್ಲಿ ಮದ್ಯಪ್ರಿಯರು ಲಸಿಕೆ ಪಡೆದಿದ್ದರೆ ಮಾತ್ರ ಮದ್ಯ ಖರೀದಿ ಮಾಡಬಹುದು ಎಂಬ ಆದೇಶ ಹೊರಡಿಸಿದ್ದಾರೆ.