ನವದೆಹಲಿ: ಕೊರೊನಾ ಸೋಂಕು ತಡೆಗೆ ಶೀಘ್ರದಲ್ಲೇ ಲಸಿಕೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
2021 ರ ಮೊದಲು ಕೊರೋನಾ ತಡೆ ಲಸಿಕೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಕುರಿತಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ್ದು, ಕೊರೋನಾ ವೈರಸ್ ಗೆ ಲಸಿಕೆ ಅಭಿವೃದ್ಧಿ ಮುಂದಿನ ವರ್ಷದವರೆಗೆ ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಗಸ್ಟ್ 15ರೊಳಗೆ ಲಸಿಕೆ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವ ಆಶಯ ಹೊಂದಿತ್ತು. ಆದರೆ, ಮಾನವ ಕ್ಲಿನಿಕಲ್ ಪ್ರಯೋಗದ ನಂತರ ಲಸಿಕೆ ಬಿಡುಗಡೆಗೆ ಹೆಚ್ಚಿನ ಸಮಯ ಅವಶ್ಯಕವಾಗಿರುವುದರಿಂದ ಸದ್ಯಕ್ಕೆ ಕೋರೋನಾ ಲಸಿಕೆ ಅಭಿವೃದ್ಧಿ ಮಾಡಿ ಬಿಡುಗಡೆ ಮಾಡುವುದು ಕಷ್ಟಸಾಧ್ಯವೆನ್ನಲಾಗಿದೆ.
ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಕೊರೋನಾ ಲಸಿಕೆ ಕಂಡು ಹಿಡಿಯುವಲ್ಲಿ ಭಾರತೀಯ ಸಂಶೋಧಕರು ಮುಂಚೂಣಿಯಲ್ಲಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಿದ ನಂತರದಲ್ಲಿ ವಿಶ್ವದ ಸುಮಾರು ಶೇಕಡ 60ರಷ್ಟು ಲಸಿಕೆಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗಿದೆ.