ನವದೆಹಲಿ: ಕೊರೊನಾ ಸಾಂಕ್ರಮಿಕ ರೋಗದ ಕಾರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದು ಸರ್ಕಾರಿ ಉದ್ಯೋಗಗಳ ನೇಮಕಾತಿ ಮೇಲೆ ಪರಿಣಾಮ ಬೀರುವುದಿಲ್ಲ. ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 4ರಂದು ಹೊರಡಿಸಲಾದ ಸುತ್ತೋಲೆ ಹುದ್ದೆಗಳ ನೇಮಕಾತಿ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹುದ್ದೆಗಳ ನೇಮಕಾತಿಗೆ ನಿರ್ಬಂಧ ಹೇರಿಲ್ಲ ಅಥವಾ ಕಡಿತಗೊಳಿಸಲ್ಲ. ಸಿಬ್ಬಂದಿ ಆಯ್ಕೆ ಆಯೋಗ, ಯುಪಿಎಸ್ಸಿ, ರೈಲ್ವೆ ನೇಮಕಾತಿ ಮಂಡಳಿ ಮೊದಲಾದ ಸರ್ಕಾರಿ ಸಂಸ್ಥೆಗಳ ಮೂಲಕ ಸಾಮಾನ್ಯ ನೇಮಕಾತಿಗಳು ಯಾವುದೇ ನಿರ್ಬಂಧವಿಲ್ಲದೆ ಮುಂದುವರೆಯಲಿವೆ ಎಂದು ಹೇಳಲಾಗಿದೆ.
ಅಭಿವೃದ್ಧಿಯೇತರ ವೆಚ್ಚಗಳನ್ನು ನಿಷೇಧಿಸಲಾಗಿದೆ ಎಂದು ಈ ಹಿಂದೆ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಾದ ನಂತರ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ನೇಮಕಾತಿಗೆ ತಡೆ ಇರುವುದಿಲ್ಲ ಎಂದು ತಿಳಿಸಿದೆ.