15 ವರ್ಷದ ಬಾಲಕ ಎಮ್ಮೆ ಕಾಯಲು ಹೋಗಿದ್ದಾಗ ಕರಡಿಯೊಂದು ದಾಳಿ ಮಾಡಿದ್ದು, ಕರಡಿಯ ಮಾರಣಾಂತಿಕ ದಾಳಿಯಿಂದ ಎಮ್ಮೆಗಳು ರಕ್ಷಿಸಿವೆ ಎಂದು ಹೇಳಲಾಗಿದೆ.
ಹೌದು, ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಬೈನ್ಸೆದೆಹಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೀಪಕ್ ಎನ್ನುವ ಬಾಲಕ ಕುರಿ ಹಾಗೂ ಎಮ್ಮೆಗಳನ್ನು ಮೇಯಿಸಲೆಂದು ಅರಣ್ಯ ಪ್ರದೇಶದತ್ತ ಹೋಗಿದ್ದಾನೆ. ಆ ವೇಳೆ ರಸ್ತೆಯಲ್ಲಿ ಕರಡಿ ಹಾಗೂ ಕರಡಿ ಮರಿ ಕಾಣಿಸಿಕೊಂಡಿವೆ. ಕೆಲವೇ ಕ್ಷಣದಲ್ಲಿ ಕರಡಿ ದೀಪಕ್ ಮೇಲೆ ಹಲ್ಲೆ ಮಾಡಲು ಮುಂದಾಗಿದೆ. ಈ ವೇಳೆ ಹತ್ತಿರದಲ್ಲಿಯೇ ಇದ್ದ 15ರಿಂದ 20 ಎಮ್ಮೆಗಳ ಗುಂಪು ಕರಡಿಯ ಮೇಲೆ ದಾಳಿ ಮಾಡಿ ಅದನ್ನು ಓಡಿಸಿವೆ.
ದೀಪಕ್ ಮೇಲೆ ಕರಡಿ ದಾಳಿಯ ವಿಷಯವನ್ನು ದೀಪಕ್ ತಂದೆಗೆ ಗ್ರಾಮದ ಬಾಲಕನೊಬ್ಬ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದು ದೀಪಕ್‌ನನ್ನು ಸ್ಥಳೀಯ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ದೀಪಕ್ ನ ವೈದ್ಯಕೀಯ ಖರ್ಚನ್ನು ಸರಕಾರವೇ ಭರಿಸಲಿದೆ ಎಂದು ಸ್ಥಳೀಯ ಅರಣ್ಯಾಧಿಕಾರಿ ಪಿ.ಡಿ. ಗಬ್ರಿಯಲ್ ಸ್ಪಷ್ಟಪಡಿಸಿದ್ದಾರೆ.