ಪಾಟ್ನಾ: ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ಲವ್ ಜಿಹಾದ್ ತಡೆ ಕಾಯ್ದೆಗೆ ಜನತಾದಳ ಯುನೈಟೆಡ್ (ಜೆಡಿಯು) ವಿರೋಧ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶ ಹಾಗೂ ಇತರೆಡೆ ಬಿಜೆಪಿ ಮಿತ್ರ ಪಕ್ಷವಾಗಿರುವ ಜೆಡಿಯು ಕಮಲ ಪಕ್ಷದ ನಡೆಯನ್ನು ಭಾನುವಾರ ಬಹಿರಂಗವಾಗಿ ಟೀಕಿಸಿದೆ.
“ಲವ್ ಜಿಹಾದ್ ತಡೆ ಕಾಯ್ದೆಯು ಸಮುದಾಯವನ್ನು ಒಡೆಯುವುದಾಗಿದೆ. ನಾವು ಬಿಜೆಪಿಗೆ ಬೆಂಬಲ ನೀಡಿದ್ದೇವೆ ಎಂದ ಮಾತ್ರಕ್ಕೆ ಆ ಪಕ್ಷದ ಎಲ್ಲ ನಡೆಯನ್ನೂ ನಾವು ಬೆಂಬಲಿಸುತ್ತೇವೆ ಎಂದಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿ ನಾಯಕರು ಅಟಲ್ ಬಿಹಾರಿ ವಾಜಪೇಯಿ ಅವರ ಮೈತ್ರಿ ಧರ್ಮ ಅನುಸರಿಸಬೇಕು” ಎಂದು ಜೆಡಿಯು ವಕ್ತಾರ ಅಜಯ ಪಿ.ತ್ಯಾಗಿ ಹೇಳಿದ್ದಾರೆ.
ಜೆಡಿಯು, ಬಿಜೆಪಿ ವಿರುದ್ಧ ಸಿಡಿಮಿಡಿಗೊಳ್ಳಲು ಇನ್ನೊಂದು ಪ್ರಮುಖ ಕಾರಣ ಅರುಣಾಚಲ ಪ್ರದೇಶದಲ್ಲಿದ್ದ ಜೆಡಿಯು 9 ಎಂಎಲ್‌ಎಗಳ ಪೈಕಿ 6 ಜನ ಈಗಾಗಲೇ ಬಿಜೆಪಿ ಸೇರಿದ್ದಾರೆ. ಇದು ಪಕ್ಷದ ಅಸ್ತಿತ್ವಕ್ಕೆ ಹೊಡೆತ ಬೀಳುತ್ತಿದೆ ಎಂಬುದು ಜೆಡಿಯು ನಾಯಕರ ಅಸಮಾಧಾನವಾಗಿದೆ.