ನೆಮ್ಮದಿ ಸುದ್ದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಚಿಕಿತ್ಸೆ 25-01-2021 5:57PM IST / No Comments / Posted In: Latest News, India ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಸಂತ್ರಸ್ತರು ಇನ್ಮುಂದೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಬೇಕು ಎಂಬ ಅವಶ್ಯತೆ ಇರೋದಿಲ್ಲ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಸ್ಥಳೀಯ ಆಸ್ಪತ್ರೆ ಮಾತ್ರವಲ್ಲದೇ ನರ್ಸಿಂಗ್ ಹೋಂಗೆ ತೆರಳಿದ್ರೂ ಕೂಡ ಟ್ರೀಟ್ಮೆಂಟ್ ಫ್ರೀ ಆಗಲಿದೆ. ಕೇಂದ್ರ ರಸ್ತೆ ಹಾಗೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ನೂತನ ಯೋಜನೆಯ ಪ್ರಕಾರ ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ವ್ಯಕ್ತಿಗೆ 1.5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸಾ ವ್ಯವಸ್ಥೆ ಸಿಗಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ. ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವವರಿಗೆ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಅಪಘಾತಕ್ಕೀಡಾದ ವ್ಯಕ್ತಿ ಸಾವಿಗೀಡಾದ್ರೆ ಈ ಪರಿಹಾರದ ಮೊತ್ತ ಮೃತರ ಕುಟುಂಬಸ್ಥರಿಗೆ ಸಿಗಲಿದೆ. ರಾಷ್ಟ್ರೀಯ ನಗದುರಹಿತ ಚಿಕಿತ್ಸಾ ಯೋಜನೆಯ ಅಡಿಯಲ್ಲಿ ಈ ಎಲ್ಲ ಪ್ರಯೋಜನ ಸಿಗಲಿದೆ. ಅಲ್ಲದೇ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಭಾರತೀಯರ ಜೊತೆಯಲ್ಲಿ ವಿದೇಶಿ ಪ್ರವಾಸಿಗರನ್ನೂ ಸೇರಿಸಿಕೊಳ್ಳಲಾಗಿದೆ. ಎಕ್ಸ್ಪ್ರೆಸ್ವೇ, ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ, ರಾಷ್ಟ್ರೀಯ ರಾಜಮಾರ್ಗ, ಪ್ರದೇಶ ರಾಜಮಾರ್ಗ, ಜಿಲ್ಲಾ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ನಡೆಯುವ ಅಪಘಾತಕ್ಕೆ ಈ ಯೋಜನೆ ಸೌಲಭ್ಯ ಸಿಗಲಿದೆ. ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವ ಸರಿ ಸುಮಾರು 5.5 ಲಕ್ಷ ಮಂದಿಯಲ್ಲಿ 4.5 ಲಕ್ಷ ಮಂದಿ ಈ ಯೋಜನೆಯ ಲಾಭ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿಕಿತ್ಸೆಯ ವೆಚ್ಚದ ಈ ನಿಬಂಧನೆಯನ್ನು ವಾಹನ ಅಪಘಾತ ನಿಧಿಯಿಂದ ಮಾಡಲಾಗುವುದು. ನಗದು ರಹಿತ ಚಿಕಿತ್ಸೆಗಾಗಿ ವಾಹನಗಳನ್ನು ವಿಮೆ ಮಾಡುವ ಸಾಮಾನ್ಯ ವಿಮಾ ಕಂಪನಿಗಳ ಗಳಿಕೆಯ ಒಂದು ಭಾಗವನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಟೋಲ್ ತೆರಿಗೆ ಹೊಂದಿರುವ ವಾಹನಗಳಿಂದ ವಿಧಿಸಲಾಗುವ ಸೆಸ್‌ನ ಒಂದು ಭಾಗವನ್ನು ಈ ನಿಧಿಯಲ್ಲಿ ನೀಡಲಾಗುವುದು.