ನೀಳ ಕೂದಲನ್ನ ಹೊಂದಬೇಕು ಅನ್ನೋ ಆಸೆ ಬಹುತೇಕ ಎಲ್ಲ ಮಹಿಳೆಯರಿಗೂ ಇರುತ್ತೆ. ನಿಮ್ಮ ಈ ನೀಳ ಕೇಶರಾಶಿಯೇ ಸಮಾಜದಲ್ಲಿ ನಿಮಗೊಂದು ಹೆಸರನ್ನ ತಂದುಕೊಡುತ್ತೆ ಅಂದರೆ ಅದಕ್ಕಿಂತ ಸಂತೋಷದ ವಿಚಾರ ಇನ್ನೊಂದಿಲ್ಲ.
ಇದೇ ರೀತಿ ನೀಳ ಕೂದಲನ್ನ ಹೊಂದಿರುವ ಅಪ್ರಾಪ್ತೆ ಎಂಬ ವಿಶ್ವ ದಾಖಲೆಯನ್ನ ನಿರ್ಮಿಸಿದ್ದ 18ರ ಯುವತಿ ಇದೀಗ ಅರ್ಥಪೂರ್ಣ ಕಾರ್ಯಕ್ಕಾಗಿ ತಮ್ಮ ಕೂದಲನ್ನ ಕತ್ತರಿಸಿದ್ದಾರೆ.
ಗುಜರಾತ್ನ ಮೊಡಾಸಾ ನಿವಾಸಿಯಾಗಿರುವ ನಿಲಾಂಶಿ ಪಟೇಲ್ 2018ರಿಂದ ವಿಶ್ವದಲ್ಲೇ ಅತೀ ಉದ್ದ ಕೂದಲನ್ನ ಹೊಂದಿರುವ ಅಪ್ರಾಪ್ತೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಈಕೆಗೆ 16 ವರ್ಷವಾಗಿದ್ದಾಗ ಕೂದಲು 170.5 ಸೆಂಟಿಮೀಟರ್ ಉದ್ದ ಹೊಂದಿತ್ತು. 18 ವರ್ಷದ ಹುಟ್ಟಿದ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಅಂದರೆ ಜುಲೈ 2020ರಲ್ಲಿ ಈ ಕೂದಲನ್ನ ಅಳತೆ ಮಾಡಿದ ವೇಳೆ ಅದು 200 ಸೆಂಟಿಮೀಟರ್ನಷ್ಟು ಬೆಳೆದಿತ್ತು. ತಮ್ಮ ಕೇಶ ರಾಶಿ ಮೂಲಕವೇ ನಿಲಾಂಶಿ ವಿಶ್ವ ದಾಖಲೆಯನ್ನ ನಿರ್ಮಿಸಿದ್ದರು.
ಆದರೆ ಇದೀಗ ನಿಲಾಂಶಿ ತಮ್ಮ ಕೂದಲನ್ನ ಕತ್ತರಿಸಿದ್ದಾರೆ. ನನ್ನ ಕೂದಲು ನನಗೆ ಒಳ್ಳೆಯದನ್ನ ಮಾಡಿದೆ. ನನ್ನ ಕೇಶರಾಶಿಯಿಂದಾಗಿ ನಾನು ನಿಜ ಜೀವನದ ರಪುಂಜೆಲ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದೆ. ಇದೀಗ ನನ್ನ ಕೇಶರಾಶಿಗೆ ನಾನು ಏನಾದರೊಂದನ್ನ ನೀಡುವ ಸಮಯ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧಕಿ ನಿಲಾಂಶಿ ಹೇಳಿದ್ದಾರೆ.
ನಿಲಾಂಶಿ 6 ವರ್ಷ ವಯಸ್ಸಿನವಳಾಗಿದ್ದಾಗ ಸಲೂನ್ನಲ್ಲಾದ ಒಂದು ಕೆಟ್ಟ ಅನುಭವದ ಬಳಿಕ ಕೂದಲನ್ನ ಕತ್ತರಿಸದೇ ಇರಲು ನಿರ್ಧರಿಸಿದ್ರು. ವಾರಕ್ಕೊಮ್ಮೆ ತಲೆ ಸ್ನಾನ ಮಾಡ್ತಿದ್ದ ನಿಲಾಂಶಿಗೆ ಕೂದಲನ್ನ ಬಾಚಿಕೊಳ್ಳಲು ತಾಯಿ ನೆರವಾಗುತ್ತಿದ್ದರು.
ಕೂದಲನ್ನ ಕತ್ತರಿಸುವ ನಿರ್ಧಾರಕ್ಕೆ ಬಂದ ನಿಲಾಂಶಿ ಮುಂದೆ ಮೂರು ಆಯ್ಕೆಗಳಿದ್ದವು. ಕೂದಲನ್ನ ಹರಾಜಿಗೆ ಇಡುವುದು, ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವುದು ಹಾಗೂ ಮ್ಯೂಸಿಯಂನಲ್ಲಿ ಇಡುವುದು.
ನಿಲಾಂಶಿ ತಾಯಿ ಕಾಮಿನಿಬೆನ್ ಮ್ಯೂಸಿಯಂನಲ್ಲಿ ಕೂದಲನ್ನ ಸಂಗ್ರಹಿಸಿ ಇಡುವಂತೆ ಸಲಹೆ ನೀಡಿದ್ರು. ಆದರೆ ನೀಲಾಂಶಿ ಈ ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಲು ನಿರ್ಧರಿಸಿದ್ರು.
ಬರೋಬ್ಬರಿ 12 ವರ್ಷದ ಕೂದಲನ್ನ ಕತ್ತರಿಸಿದ ನೀಲಾಂಶಿ ತಮ್ಮ ಕೂದಲುಗಳಿಗೆ ಮುತ್ತನ್ನ ನೀಡಿದ್ರು. ಇದೀಗ ನೀಲಾಂಶಿ ಶಾರ್ಟ್ ಹೇರ್ ಕಟ್ ಸ್ಟೈಲ್ನ್ನ ಎಂಜಾಯ್ ಮಾಡ್ತಿದ್ದಾರೆ.