ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಅನೇಕರು ಸಾಥ್ ನೀಡುತ್ತಿದ್ದಾರೆ. ಅದರಲ್ಲೂ ಪಂಜಾಬ್ ಹಾಗೂ ಹರಿಯಾಣ ಪ್ರಾಂತ್ಯಗಳಲ್ಲಿ ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಜನಸಾಮಾನ್ಯವರು ವಿಭಿನ್ನ ಪ್ರಯತ್ನಗಳನ್ನ ಮಾಡ್ತಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಹರಿಯಾಣದಲ್ಲಿ ವರನೊಬ್ಬ ತನ್ನ ಐಷಾರಾಮಿ ಕಾರನ್ನ ಬದಿಗಿಟ್ಟು ಟ್ರ್ಯಾಕ್ಟರ್ನಲ್ಲಿ ಮದುವೆ ಮಂಟಪಕ್ಕೆ ತೆರಳುವ ಮೂಲಕ ರೈತರ ಹೋರಾಟಕ್ಕೆ ಪರೋಕ್ಷ ಬೆಂಬಲ ಸೂಚಿಸಿದ್ದು ನಿಮಗೆ ನೆನಪಿರಬಹುದು.
ಇದೀಗ ಇದೇ ರೀತಿಯ ಇನ್ನೊಂದು ಪ್ರಯತ್ನ ಉತ್ತರಾಖಂಡ್ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಕಂಡು ಬಂದಿದೆ.
ಹೃದಯಸ್ಪರ್ಶಿಯಾಗಿದೆ ಬಂಧಮುಕ್ತ ಪಕ್ಷಿಗಳ ಸ್ವಾತಂತ್ರದ ಹಾರಾಟ
ಸಿವಲ್ಜೀತ್ ಸಿಂಗ್ ಹಾಗೂ ಸಂದೀಪ್ ಕೌರ್ ಬಾಜ್ಪಿರ್ನ ಗುರುದ್ವಾರದಲ್ಲಿ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಏರಿಯಾದ ಸಾಕಷ್ಟು ಮಂದಿ ರೈತರು ಕೃಷಿ ಮಸೂದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮದುವೆಯ ದಿನ ರೈತ ಗೀತೆಗಳನ್ನ ನುಡಿಸೋದ್ರ ಮೂಲಕ ಹಾಗೂ ರೈತ ಪರ ಘೋಷಣೆಗಳನ್ನ ಕೂಗುವ ಮೂಲಕ ಕೃಷಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ನೂತನ ದಂಪತಿ ಐಷಾರಾಮಿ ಕಾರುಗಳನ್ನ ಬದಿಗಿಟ್ಟು ಗುರುದ್ವಾರದಿಂದ ಟ್ರ್ಯಾಕ್ಟರ್ ಏರಿ ಮನೆಗೆ ಬರುವ ಮೂಲಕ ರೈತರಿಗೆ ಸಾಥ್ ನೀಡಿದ್ದಾರೆ. ಮದುವೆಗೆಂದು ಎತ್ತಿಟ್ಟಿದ್ದ ಹಣದಲ್ಲಿ ಉಳಿದ ಹಣವನ್ನ ರೈತರಿಗೆ ಊಟದ ವ್ಯವಸ್ಥೆ ಮಾಡಲು ಖರ್ಚು ಮಾಡಲಿದ್ದೇವೆ ಎಂದು ಈ ಕುಟುಂಬ ಹೇಳಿದೆ.