ಕೇರಳದ ಕೊಚ್ಚಿ ಪ್ರದೇಶದ ಡಿಸಿಪಿ ಆಗಿ ಹೊಸದಾಗಿ ಬಂದಿರುವ ಐಪಿಎಸ್ ಅಧಿಕಾರಿಣಿ ಐಶ್ವರ್ಯಾ ದೋಂಗ್ರೆ, ಅಧಿಕಾರ ವಹಿಸಿಕೊಳ್ಳುತ್ತಲೇ ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಶಿಕ್ಷೆಯ ರೂಪದಲ್ಲಿ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಮಾಡಿ ಸುದ್ದಿ ಮಾಡಿದ್ದಾರೆ.
ಕೇರಳದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿಯಾದ ದೋಂಗ್ರೆ ಅವರು ಕೊಚ್ಚಿಗೆ ವರ್ಗಾವಣೆಯಾದ ಕೂಡಲೇ, ಸ್ವಚ್ಛತಾ ಕಾರ್ಯಕ್ರಮವೊಂದನ್ನು ವೀಕ್ಷಿಸಲು ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಐಶ್ವರ್ಯಾ ಸಮವಸ್ತ್ರದಲ್ಲಿ ಇರದಿದ್ದ ಕಾರಣ, ಸೆಂಟ್ರಿ ಡ್ಯೂಟಿಯಲ್ಲಿದ್ದ ಮಹಿಳಾ ಪೇದೆಯೊಬ್ಬರು ತಡೆದು ಪ್ರಶ್ನಿಸಿದ್ದಾರೆ.
ತಾನು ತಡೆದಿದ್ದು ಐಪಿಎಸ್ ಅಧಿಕಾರಿಯನ್ನು ಎಂದು ಅರಿವಾಗುತ್ತಲೇ ಆ ಮಹಿಳಾ ಪೇದೆ ಕ್ಷಮೆಯಾಚಿಸಿದ್ದಾರೆ. ಅದೂ ಅಲ್ಲದೇ ಕೋವಿಡ್-19 ಡ್ಯೂಟಿ ಮೇಲೆ ಇದ್ದ ಕಾರಣ ಸ್ಟೇಷನ್‌ಗೆ ಬರುವ ಪ್ರತಿಯೊಬ್ಬರನ್ನೂ ಪ್ರಶ್ನಿಸಬೇಕಾಗಿತ್ತು ಎಂದು ವಿವರಣೆ ಕೊಟ್ಟಿದ್ದಾರೆ ಮಹಿಳಾ ಪೇದೆ. ಆದರೆ ಇದಕ್ಕೆ ಒಪ್ಪದ ಐಶ್ವರ್ಯಾ, ತಾವು ಬಂದ ಅಧಿಕೃತ ವಾಹನವನ್ನು ನೋಡಿಯಾದರೂ ಗುರುತು ಹಿಡಿಯಬಾರದೇ ಎಂದು ಪ್ರಶ್ನಿಸಿದ್ದಾರೆ.
ಬಿಸಿ ರಕ್ತದ ಈ ಯುವ ಅಧಿಕಾರಿಣಿ ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳಿಗೆ ಮುಂದಾಗಬಾರದು ಎಂದು ನಗರದ ಪೊಲೀಸ್ ಕಮಿಷನರ್ ನಾಗರಾಜು ಆಕೆಗೆ ಬುದ್ಧಿ ಹೇಳಿದ್ದಾರೆ.