ವಿದೇಶಗಳಿಂದ ವಿಮಾನದ ಮೂಲಕ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಯುಕೆ, ಯೂರೋಪ್, ದಕ್ಷಿಣ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ಭಾರತಕ್ಕೆ ಬರುವವರಿಗೆ ಈ ನಿಯಮಗಳು ಅನ್ವಯಿಸುತ್ತವೆ.
ದೇಶದ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದಿಳಿದರೂ ಮೊದಲು ಸ್ವಯಂ ದೃಢೀಕರಣ ಅರ್ಜಿ ಭರ್ತಿ ಮಾಡಿಕೊಡಬೇಕು. ಯಾವ ದೇಶದಿಂದ ಆಗಮಿಸಿರುವುದು, 14 ದಿನಗಳ ಹಿಂದಿನ ಸಂಚಾರದ ಇತಿಹಾಸ, ಮುಂದಿನ ಪ್ರಯಾಣ ಎಲ್ಲಿಗೆ ಎಂಬಿತ್ಯಾದಿ ಮಾಹಿತಿಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.
ಒಂದು ವೇಳೆ ಬಂದಿಳಿದ ನಿಲ್ದಾಣದಿಂದ ಬೇರೆ ಸ್ಥಳೀಯ ನಿಲ್ದಾಣಕ್ಕೆ ವಿಮಾನದ ಮೂಲಕವೇ ಪ್ರಯಾಣಿಸುವುದಾದರೆ, ಅಲ್ಲೇ ಕೊರೋನಾ ಪರೀಕ್ಷೆಗೆ ಒಳಪಟ್ಟು ವರದಿ ಬರುವವರೆಗೆ 6-8 ಗಂಟೆಗಳ ಕಾಲ ಕಾಯಬೇಕು. ವರದಿ ನೆಗೆಟಿವ್ ಆಗಿದ್ದರೆ, 7 ದಿನ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ಪುನಃ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ಬಂದರೆ, ಹೋಮ್ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಿ, ಉಳಿದ 7 ದಿನಗಳು ನಿಗಾದಲ್ಲಿಡಲಾಗುತ್ತದೆ.
ಇನ್ನು ವಿಮಾನದಲ್ಲಿ ಬಂದಳಿದು ಕಾರಿನ ಮೂಲಕ ತಮ್ಮ ಗಮ್ಯಸ್ಥಾನ ತಲುಪುವುದಿದ್ದರೆ, ಕೊರೋನಾ ಪರೀಕ್ಷೆಗಾಗಿ ಗಂಟಲದ್ರವ ಇತ್ಯಾದಿಗಳನ್ನು ಕೊಟ್ಟು ತೆರಳಬೇಕು. ವರದಿ ಬಂದ ಬಳಿಕ 7 ದಿನ ಹೋಮ್ ಕ್ವಾರಂಟೈನ್ ಮಾಡಿ, ಇನ್ನೇಳು ದಿನ ನಿಗಾದಲ್ಲಿ ಇರಿಸಲಾಗುತ್ತದೆ.
ಅಕಸ್ಮಾತ್ ವಿಮಾನ ನಿಲ್ದಾಣದಲ್ಲೇ ಪಾಸಿಟಿವ್ ವರದಿ ಬಂದರೆ, ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಿದ್ದು, ಫೆ.23 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.