ಬ್ರಿಟನ್ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್ನಿಂದ ಡಿಸೆಂಬರ್ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ.
ಕಳೆದ ವಾರದಲ್ಲಿ ಕೋವಿಡ್ ವೈರಸ್ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ.
ಕೊರೊನಾ ವೈರಸ್ ತನ್ನಲ್ಲಿ ಅನೇಕ ಬದಲಾವಣೆಯನ್ನ ಮಾಡಿಕೊಂಡು ಹೊಸ ರೂಪವನ್ನ ಪಡೆದುಕೊಂಡಿದೆ. ಕೊರೊನಾ ವೈರಸ್ನ ಪ್ರೋಟೀನ್ ಹಾಗೂ ಆರ್ಎನ್ಎಗಳಲ್ಲಿ ಕೆಲ ಬದಲಾವಣೆ ಉಂಟಾಗಿದ್ದು ಇದು ಮಾನವ ಜೀವಕೋಶದ ಎಸಿಇ 2 ಗ್ರಾಹಕದೊಂದಿಗೆ ಬಂಧಿಸುತ್ತದೆ. ಈ ಕಾರಣದಿಂದಾಗಿ ಈ ರೂಪಾಂತರಗೊಂಡ 70 ಪ್ರತಿಶತ ಹೆಚ್ಚಿನ ಪ್ರಮಾಣದಲ್ಲಿ ರೋಗವನ್ನ ಹರಡಬಲ್ಲುದು ಎಂದು ಅಂದಾಜಿಸಲಾಗಿದೆ.
ಆದರೆ ಈ ರೂಪಾಂತರಗೊಂಡ ವೈರಸ್ ತೀವ್ರವಾದ ಕಾಯಿಲೆ ಅಥವಾ ಮರಣಕ್ಕೆ ಕಾರಣವಾಗುತ್ತಾ ಎಂಬುದರ ಬಗ್ಗೆ ಇನ್ನೂ ಯಾವುದೇ ಪುರಾವೆಗಳು ದೊರಕಿಲ್ಲ. ಈ ಹೊಸ ವೈರಸ್ನ ಪರಿಣಾಮದ ಬಗ್ಗೆ ಸಂಶೋಧನೆಗಳು ಮುಂದುವರಿದಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ರೂಪಾಂತರಗೊಂಡ ವೈರಸ್ ಬಗ್ಗೆ ಆತಂಕ ಬೇಡ ಎಂದು ಹೇಳಿದೆ.