ಮಹತ್ವದ ಬೆಳವಣಿಗೆಯೊಂದರಲ್ಲಿ, ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮದಿನವನ್ನು ’ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.
ಜನವರಿ 23ರಂದು ನೇತಾಜಿ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಈ ನಿರ್ಣಯಕ್ಕೆ ಬಂದಿದೆ.
“ನೇತಾಜಿ ಅವರ ಅಚಲ ಹಾಗೂ ನಿಸ್ವಾರ್ಥ ರಾಷ್ಟ್ರಸೇವೆಯನ್ನು ಗೌರವಿಸಲು ಭಾರತ ಸರ್ಕಾರ ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನವನ್ನು ಪರಾಕ್ರಮ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದೆ” ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ನೇತಾಜಿ ಅವರ 125ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶವಾಸಿಗಳು ರಾಷ್ಟ್ರಕ್ಕೆ ಅವರು ಕೊಟ್ಟ ಶ್ರೇಷ್ಠ ಸೇವೆಯನ್ನು ಸ್ಮರಿಸುತ್ತಾರೆ. ನೇತಾಜಿ ಅವರ 125ನೇ ಜನ್ಮವರ್ಷವನ್ನು ಜನವರಿ 2021ರಿಂದಲೇ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ” ಎಂದು ಸಚಿವಾಲಯ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ನೇತಾಜಿರ ನೆನಪುಗಳನ್ನು ಸಂರಕ್ಷಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕೆಂಪು ಕೋಟೆಯಲ್ಲಿ ಬೋಸರ ಸ್ಮರಣಾರ್ಥ ಮ್ಯೂಸಿಯಂ ಒಂದನ್ನು, ಪ್ರಧಾನಿ ಮೋದಿ ಜನವರಿ 23, 2019ರಂದು ಉದ್ಘಾಟಿಸಿದ್ದರು.