ಕೋವಿಡ್-19 ಸೋಂಕು ತಡೆಗೆ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು ವೈರಸ್ ವಿರುದ್ಧ ಲಸಿಕೆ ಹೊರಬಂದ ಮೇಲೂ ಮುಂದುವರೆಯಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮುಖ್ಯಸ್ಥ ಭಾರ್ಗವ ತಿಳಿಸಿದ್ದಾರೆ.
ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ಆಸ್ಪತ್ರೆಯ ಸೆಮಿನಾರ್‌ನಲ್ಲಿ ಮಾತನಾಡಿದ ಭಾರ್ಗವ “ಮಾಸ್ಕ್‌ಗಳು ಒಂದು ರೀತಿಯ ಲಸಿಕೆ ಇದ್ದಂತೆ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಅವುಗಳ ಕೊಡುಗೆಯನ್ನು ಮರೆಯಲಾಗದು. ನಾವು ಲಸಿಕೆಗಳ ಅಭಿವೃದ್ಧಿಯ ಕೆಲಸದಲ್ಲಿ ನಿರತರಾಗಿದ್ದೇವೆ. ಭಾರತದಲ್ಲಿ ಒಟ್ಟು ಐದು ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಇವುಗಳಲ್ಲಿ ಮೂರು ಹೊರದೇಶದವಾಗಿವೆ. ಆದರೆ ಕೋವಿಡ್-19ಗೆ ಅಂತ್ಯ ಹಾಡಲು ಚುಚ್ಚುಮದ್ದುಗಳು ಸಾಲದು. ಆರೋಗ್ಯ ಹಾಗೂ ಸುರಕ್ಷತೆಯ ಶಿಷ್ಟಾಚಾರಗಳನ್ನು ಪಾಲಿಸುವುದನ್ನು ನಾವು ಮುಂದುವರೆಸುತ್ತಲೇ ಇರಬೇಕು” ಎಂದು ತಿಳಿಸಿದ್ದಾರೆ.
“ಮುಂದಿನ ವರ್ಷದ ಜುಲೈ ವೇಳೆಗೆ ದೇಶದ 30 ಕೋಟಿ ಜನರಿಗೆ ಲಸಿಕೆ ಹಾಕುವ ಪ್ಲಾನ್ ಇಟ್ಟುಕೊಂಡಿದ್ದೇವೆ. ಬಳಿಕ ಭವಿಷ್ಯತ್ತಿನ ಹಾದಿಯ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಭಾರತವು ಕೇವಲ ತನಗೆ ಮಾತ್ರವಲ್ಲದೇ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ 60 ದೇಶಗಳಿಗೂ ಸಹ ಲಸಿಕೆ ಸಿದ್ಧಪಡಿಸಲಿದೆ. ಇದಕ್ಕಾಗಿ 24 ಉತ್ಪಾದನಾ ಘಟಕಗಳು ಹಾಗೂ 19 ಸಂಸ್ಥೆಗಳು ಕೋವಿಡ್-19 ಲಸಿಕೆ ತಯಾರಿಸಲು ಸಜ್ಜಾಗುತ್ತಿವೆ” ಎಂದು ಭಾರ್ಗವ ತಿಳಿಸಿದ್ದಾರೆ.