ಕರ್ನಾಟಕದ ಮೈಸೂರು ಪ್ರಾಂತ್ಯದ ಭಾಗಗಳಲ್ಲಿ, ಮೈಸೂರು ರಾಜರಾಡಳಿತದ ಪ್ರಭಾವವಿರುವ ಭಾಗಗಳಲ್ಲಿ ದಸರಾ ಎಂಬ ಹೆಸರಿನಲ್ಲಿ ದೇವಿಯನ್ನ ಆರಾಧಿಸಲಾಗುತ್ತದೆ. ಮನೆಯಲ್ಲಿ ಗೊಂಬೆಗಳನ್ನ ಓರಣವಾಗಿ ಜೋಡಿಸಿಟ್ಟು ಸಂಭ್ರಮಿಸಲಾಗುತ್ತದೆ.
ಕರ್ನಾಟಕದ ಉಳಿದ ಭಾಗಗಳಲ್ಲಿ 9 ದಿನಗಳ ಕಾಲ ದೇವಿಯ ಪೂಜೆ ಮಾಡಿ, ದೇವಿ ಮಹಾತ್ಮೆಯಂಥ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ಮುತ್ತೈದೆಯರಿಗೆ ಅರಿಶಿಣ ಕುಂಕುಮ ನೀಡಿ ಸಿಹಿಯೂಟ ಮಾಡಿ ದುರ್ಗೋತ್ಸವವನ್ನು ಸಂಭ್ರಮಿಸುತ್ತಾರೆ. ಕರ್ನಾಟಕದ ಮಲೆನಾಡು ಭಾಗಗಳಲ್ಲಿ ದೇವರ ಮನೆಯ ಮುಂದೆ ಪುಸ್ತಕಗಳನ್ನಿಟ್ಟು ಪೂಜೆ ಮಾಡುವ ಮೂಲಕ ತಾಯಿ ಸರಸ್ವತಿಯನ್ನ ಆರಾಧಿಸುತ್ತಾರೆ. ವಿದ್ಯಾದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನ ತೆಗೆದು ಓದುವ ಸಂಪ್ರದಾಯವೂ ಇದೆ.
ತಮಿಳುನಾಡು :
ತಮಿಳುನಾಡಿನಲ್ಲಿಯೂ ನವರಾತ್ರಿಯ ಆಚರಣೆಯಲ್ಲಿ ಗೊಂಬೆ ಇಡುವ ಸಂಪ್ರದಾಯವಿದೆ. ಅಲ್ಲದೆ, ನವರಾತ್ರಿಯಲ್ಲಿ ವಿಶೇಷವಾಗಿ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯನ್ನ ಆರಾಧಿಸಲಾಗುತ್ತದೆ. ದೇವಿಯ ವಿಶೇಷ ಪೂಜೆ ಮಾಡಿ ಮುತ್ತೈದೆಯರಿಗೆ ಬಾಗಿನ ನೀಡಿ ಸಂಭ್ರಮಿಸುತ್ತಾರೆ.
ಕೇರಳ :
ಕೇರಳದಲ್ಲಿ ಸಾಮಾನ್ಯವಾಗಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಮಾತ್ರ ದೇವಿಯ ಆರಾಧನೆ ನಡೆಯುತ್ತದೆ. ಅಷ್ಟಮಿ, ನವಮಿ ಮತ್ತು ದಶಮಿಯ ದಿನ ಕೇರಳದಲ್ಲಿ ತಾಯಿ ಸರಸ್ವತಿಯ ಪೂಜೆ ನಡೆಸಲಾಗುತ್ತದೆ. ಕಲೆಯನ್ನ ಸರಸ್ವತಿ ಎಂದೇ ಪರಿಗಣಿಸುವ ಕೇರಳೀಯರು ಮನೆಯಲ್ಲಿರುವ ಸಂಗೀತ ಸಲಕರಣೆಗಳು, ಪುಸ್ತಕಗಳು ಎಲ್ಲವನ್ನೂ ಸರಸ್ವತಿಯ ಮೂರ್ತಿಯ ಮುಂದೆ ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನ ತೆಗೆದು ಓದುತ್ತಾರೆ. ವಿದ್ಯಾದಶಮಿ ಎಂದೂ ಕರೆಯಲ್ಪಡುವ ಅಂದು ಅಧ್ಯಯನ ಮಾಡುವುದರಿಂದ ಸರಸ್ವತಿ ಒಲಿಯುತ್ತಾಳೆ ಎಂಬ ನಂಬಿಕೆ ಕೇರಳದಲ್ಲಿದೆ.
ಆಂಧ್ರಪ್ರದೇಶ :
ಆಂಧ್ರಪ್ರದೇಶದಲ್ಲಿ ನವರಾತ್ರಿಗೆ ‘ಬತುಕಾಮ್ಮ ಪಾಂಡುಗ’ ಎಂದು ಕರೆಯುತ್ತಾರೆ. ವಿಶೇಷವಾಗಿ ತೆಲಂಗಾಣ ಪ್ರದೇಶದಲ್ಲಿ ಈ ‘ಬತುಕಾಮ್ಮ ಪಾಂಡುಗ’ವನ್ನು ಆಚರಿಸಲಾಗುತ್ತದೆ. `ಬತುಕಾಮ್ಮ ಪಾಂಡುಗ ‘ಎಂದರೆ’ ತಾಯಿ ದುರ್ಗೆಗೆ ನೀಡುವ ಆಹ್ವಾನ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮನೆ ಮನೆಯಲ್ಲಿ ಮಹಿಳೆಯರು ಬಟುಕಾಮ್ಮನನ್ನು ಹೂವಿನಿಂದ ತಯಾರಿಸುತ್ತಾರೆ. ಕುಂಭದ ಆಕೃತಿಯಲ್ಲಿ ಬಟುಕಾಮ್ಮನನ್ನು ತಯಾರಿಸಿ ಪೂಜಿಸುತ್ತಾರೆ. ನವರಾತ್ರಿಯ 9 ದಿನಗಳೂ ಸಂಜೆ ದೇವಿಗೆ ಪೂಜೆ ನಡೆಸಿ ಭಕ್ತಿ ಗೀತೆಗಳನ್ನು ಹಾಡಿ, ಬಟುಕಾಮ್ಮನ ಸುತ್ತ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ನಂತರ ವಿದ್ಯಾದಶಮಿಯ ದಿನ ಹೂವಿನಿಂದ ತಯಾರು ಮಾಡಲಾಗಿದ್ದ ಬಟುಕಾಮ್ಮನನ್ನು ನೀರಿನಲ್ಲಿ ತೇಲಿಬಿಡುತ್ತಾರೆ.
ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ :
ನವರಾತ್ರಿ ಉತ್ಸವದ ಸಪ್ತಮಿ, ಅಷ್ಟಮಿ, ನವಮಿ ಮತ್ತು ದಶಮಿ ನವರಾತ್ರಿಯ ಈ ಕೊನೆಯ ನಾಲ್ಕು ದಿನಗಳನ್ನ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ದುರ್ಗಾ ಪೂಜೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ದುರ್ಗಾ ಪೂಜೆಯು ಅತ್ಯಂತ ಜನಪ್ರಿಯ ಉತ್ಸವವಾಗಿದ್ದು, ವೈಭವದಿಂದ ಆಚರಿಸಲಾಗುತ್ತದೆ. ರಾಕ್ಷಸ ಮಹಿಷಾಸುರನನ್ನ ಮರ್ಧಿಸಿದ ನೆನಪಿಗಾಗಿ ಮಹಿಷಾಸುರ ಮರ್ಧಿನಿ ದುರ್ಗಾ ದೇವಿಯ ವಿಜಯವನ್ನು ಈ ಮೂರು ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ದೇವಿಯ ಮೂರ್ತಿಯನ್ನ ಪ್ರತಿಷ್ಠಾಪಿಸಿ ವೈಭವದ ಪೂಜೆ ನಡೆಸಿ ವಿಜಯ ದಶಮಿಯ ದಿನ ವಿಸರ್ಜಿಸಲಾಗುತ್ತದೆ.
ಗುಜರಾತ್ :
ಗುಜರಾತ್ ನಲ್ಲಿ ನವರಾತ್ರಿಯಂತೂ ಅತ್ಯಂತ ಹರ್ಷದ ಉತ್ಸವ. ಇಡೀ ಗುಜರಾತಿನ ತುಂಬ ದಾಂಡಿಯಾ ಕೋಲು ಮತ್ತು ಡೋಲಿನ ಶಬ್ಧವೇ ತುಂಬಿರುತ್ತದೆ. ಸಂಪ್ರದಾಯಸ್ತರು 9 ದಿನಗಳ ಕಾಲವೂ ದಿನಪೂರ್ತಿ ಉಪವಾಸ ಮಾಡಿ ಸಂಜೆಯ ವೇಳೆ ದುರ್ಗೆಯ ಪೂಜೆ ಮಾಡಿ ನಂತರ ಊಟ ಮಾಡುತ್ತಾರೆ. ಸಂಜೆ ಹೊತ್ತಿನಲ್ಲಿ ದೇವಿಗೆ ಆರತಿ ಬೆಳಗಿ ದೇವಿಯ ಮುಂದೆ ಗರ್ಬಾ ಅಥವಾ ದಾಂಡಿಯಾ ಎಂದು ಕರೆಲ್ಪಡುವ ವಿಶಿಷ್ಟ ನೃತ್ಯ ಮಾಡಿ ಸಂತಸ ಪಡುತ್ತಾರೆ.
ಪಂಜಾಬ್ :
ಪಂಜಾಬ್ ನಲ್ಲಿ ನವರಾತ್ರಿಯ ಮೊದಲ ಏಳು ದಿನಗಳ ಕಾಲ ಹೆಚ್ಚಿನ ಪಂಜಾಬಿ ಜನರು ಹಗಲಿನಲ್ಲಿ ಉಪವಾಸ ಮಾಡಿ ದೇವಿಯನ್ನ ಪೂಜಿಸುತ್ತಾರೆ. ಪ್ರತಿ ರಾತ್ರಿ, ದೇವಿಯ ಭಜನೆ ಮಾಡಿ ಪೂಜೆ ನೆರವೇರಿಸುತ್ತಾರೆ. ಅಷ್ಟಮಿಯ ದಿನ ಉಪವಾಸ ವೃತವನ್ನು ಕೈಬಿಟ್ಟು ವಿಜಯ ದಶಮಿಯ ತನಕ ನೆರೆಹೊರೆಯ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರಿಗೆ ಹಣ, ಸಿಹಿ ತಿಂಡಿಗಳನ್ನು ನೀಡಿ ಉಡುಗೊರೆಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮನೆಗೆ ಆಹ್ವಾನಿಸುವ ಹೆಣ್ಣುಮಕ್ಕಳನ್ನು ದುರ್ಗೆಯ ಅವತಾರಗಳು ಎಂದು ಪರಿಗಣಿಸಲಾಗುತ್ತದೆ.
ಮಹಾರಾಷ್ಟ್ರ :
ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬವನ್ನ ಹೊಸ ಪ್ರಾರಂಭಕ್ಕಾಗಿರುವ ಶುಭ ಸಂದರ್ಭವಾಗಿ ಪರಿಗಣಿಸಲಾಗುತ್ತದೆ. ಹೊಸ ಮನೆ ಅಥವಾ ಕಾರನ್ನು ಖರೀದಿಸುವುದು ಹೀಗೆ ಹೊಸ ಆರಂಭವನ್ನ ನವರಾತ್ರಿಯಿಂದಲೇ ಆರಂಭಿಸಬೇಕು ಎಂಬುದು ಮಹಾರಾಷ್ಟ್ರದಲ್ಲಿರುವ ನಂಬಿಕೆ. ಅಲ್ಲದೆ, ಇಲ್ಲಿಯೂ ಕೂಡ ಮಹಿಳೆಯರು ತಮ್ಮ ಮನೆಗೆ ಹಬ್ಬದ ದಿನದಂದು ಮುತ್ತೈದೆಯರನ್ನು ಕರೆದು ಪ್ರಸಾದ ನೀಡಿ, ತೆಂಗಿನ ಕಾಯಿ, ಹಣ್ಣು, ಹೂವು, ಬಳೆ ಅರಿಶಿನ ಕುಂಕುಮ ನೀಡಿ ಗೌರವಿಸುತ್ತಾರೆ. ವಿಶೇಷವಾಗಿ ಮುಂಬೈ ಆಚರಣೆಗಳನ್ನ ಹೇಳುವುದಾದರೆ, ಇಲ್ಲಿಯ ಆಚರಣೆಯಲ್ಲಿ ಗುಜರಾತ್ ಪ್ರಭಾವವಿದೆ. ಸಾಮಾನ್ಯವಾಗಿ ಮುಂಬೈ ನಗರದಲ್ಲಿ ನವರಾತ್ರಿ ಹಬ್ಬದಲ್ಲಿ ಗರ್ಬಾ, ದಾಂಡಿಯಾ ನೃತ್ಯಗಳನ್ನ ಆಯೋಜಿಸಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಹಿಮಾಚಲ ಪ್ರದೇಶ :
ಹಿಮಾಚಲ ಪ್ರದೇಶದ ಹಿಂದೂಗಳಿಗೆ ನವರಾತ್ರಿ ಹಬ್ಬ ಅತ್ಯಂತ ಪ್ರಮುಖ ಹಬ್ಬ. ಇಲ್ಲಿ ನವರಾತ್ರಿವನ್ನು ಅತ್ಯಂತ ಭಕ್ತಿಭರಿತವಾಗಿ ಆಚರಿಸುತ್ತದೆ. ಈ ಉತ್ಸವದ ಹಬ್ಬದ ಹತ್ತನೇ ದಿನವನ್ನು ಅಂದರೆ ವಿಜಯ ದಶಮಿಯನ್ನ ಇಲ್ಲಿ ‘ಕುಲ್ಲು ದಸರಾ’ ಎಂದು ಕರೆಯಲಾಗುತ್ತದೆ. ಇತರ ರಾಜ್ಯಗಳಿಗಿಂತ ಭಿನ್ನವಾಗಿ ಇಲ್ಲಿ ಆಚರಿಸಲಾಗುತ್ತದೆ. ರಾವಣನೊಂದಿಗೆ ಯುದ್ಧ ಗೆದ್ದು ಬಂದ ರಾಮನ ವಿಜಯೋತ್ಸವದ ಕುರುಹಾಗಿ ಇಲ್ಲಿ ವಿಜಯ ದಶಮಿಯನ್ನ ಆಚರಿಸಲಾಗುತ್ತದೆ. ಹಾಡುಗಳು ಮತ್ತು ನೃತ್ಯಗಳ ಮೂಲಕ ರಾಮನನ್ನ ಬರಮಾಡಿಕೊಳ್ಳಲಾಗುತ್ತದೆ. ಎಲ್ಲ ಗ್ರಾಮಗಳಲ್ಲಿಯೂ ದೇವಸ್ಥಾನಗಳ ದೇವತೆಗಳನ್ನು ಮೆರವಣಿಗೆಯಲ್ಲಿ ಕರೆತಂದು ಹಬ್ಬ ಆಚರಿಸಲಾಗುತ್ತದೆ.