ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಗಳು ತುಂಬಿವೆ. ದೇಶದಲ್ಲಿ ಲಸಿಕೆ ಇದ್ದರೂ, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಕೊರೊನಾ ಅನೇಕ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಹೊಡೆತ ನೀಡಿದೆ.
ಬೋರ್ಡ್ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಕೊರೊನಾ ಕಾರಣಕ್ಕೆ ಶಾಲೆಗಳು ಬಾಗಿಲು ಮುಚ್ಚಿವೆ. ದೇಶದ ದೆಹಲಿ ಎನ್‌ಸಿಆರ್ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಶಾಲೆಗಳು ಬಂದ್ ಆಗಿವೆ. ಉತ್ತರ ಪ್ರದೇಶದಲ್ಲಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲ ಶಾಲೆ, ಕಾಲೇಜು, ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಏಪ್ರಿಲ್ 30ರವರೆಗೆ ಎಲ್ಲ ಶಾಲಾ – ಕಾಲೇಜು ಬಂದ್ ಆಗಲಿದೆ. ಆದ್ರೆ ಬೋರ್ಡ್ ಪರೀಕ್ಷೆ ನಡೆಯಲಿದೆ. ಇನ್ನು ದೆಹಲಿಯಲ್ಲಿ ಮುಂದಿನ ಆದೇಶದವರೆಗೆ ಶಾಲಾ – ಕಾಲೇಜು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 21ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಲಿದೆ. ಮಧ್ಯಪ್ರದೇಶದಲ್ಲಿ ಏಪ್ರಿಲ್ 15ರ ವರೆಗೆ ಶಾಲೆ ಬಂದ್ ಇರಲಿದೆ. ಬೋರ್ಡ್ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಯಿದೆ.
ತಮಿಳುನಾಡು, ಛತ್ತೀಸ್‌ಗಢ ಮತ್ತು ಜಮ್ಮುವಿನ ಶಾಲೆಗಳನ್ನೂ ಮುಚ್ಚಲಾಗಿದೆ. ತಮಿಳುನಾಡಿನಲ್ಲಿ 1 ರಿಂದ 9 ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮಾರ್ಚ್ 9ರಿಂದಲೇ ಮುಚ್ಚಲಾಗಿದೆ. ಛತ್ತೀಸ್ಗಡದಲ್ಲಿ ಮಾರ್ಚ್ 22 ರಿಂದ ಶಾಲೆಗಳನ್ನು ಮುಚ್ಚಲಾಗಿದ್ದು, ಜಮ್ಮುವಿನ ಎಲ್ಲಾ ಶಾಲೆಗಳನ್ನು ಏಪ್ರಿಲ್ 1 ರಿಂದ ಮುಚ್ಚಲಾಗಿದೆ.
ಪುದುಚೇರಿಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಮಾರ್ಚ್ 22 ರಿಂದ ಮುಚ್ಚಲಾಗಿದೆ. ಗುಜರಾತ್‌ನಲ್ಲಿ ಮುಂದಿನ ಆದೇಶ ಬರುವವರೆಗೂ ಶಾಲೆ ತೆರೆಯದಂತೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಮತ್ತೆಲ್ಲ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.
ಬಿಹಾರದ ಎಲ್ಲಾ ಸರ್ಕಾರಿ – ಖಾಸಗಿ ಶಾಲೆಗಳು, ಕಾಲೇಜುಗಳು, ಕೋಚಿಂಗ್ ಸಂಸ್ಥೆಗಳು ಏಪ್ರಿಲ್ 18 ರವರೆಗೆ ಬಾಗಿಲು ತೆರೆಯುವುದಿಲ್ಲ. ಮಿಜೋರಾಂನಲ್ಲಿಯೂ ಶಾಲೆ ತೆರೆಯದಿರಲು ಸೂಚಿಸಲಾಗಿದೆ. ರಾಜಸ್ಥಾನದಲ್ಲಿ 1 ರಿಂದ 9 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಏಪ್ರಿಲ್ 19 ರವರೆಗೆ ಮುಚ್ಚಲ್ಪಡುತ್ತವೆ. ಹರಿಯಾಣದಲ್ಲೂ ಏಪ್ರಿಲ್ 30 ರವರೆಗೆ ಶಾಲೆಗಳನ್ನು ಮುಚ್ಚಲಾಗಿದೆ.