ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸೋಂಕು ತಡೆಗಟ್ಟಲು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್ ವಿಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸೂಚನೆ ನೀಡಲಾಗಿದೆ. ನಾಸಿಕ್ ನ ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ.
ಪ್ರತಿ ವ್ಯಕ್ತಿ ಮಾರುಕಟ್ಟೆಗೆ ಹೋಗುವ ಮೊದಲು 5 ರೂಪಾಯಿ ಪಾವತಿಸಬೇಕು. ಅದಕ್ಕೆ ಪ್ರತಿಯಾಗಿ ಚೀಟಿ ನೀಡಲಾಗುತ್ತದೆ. ಆ ಚೀಟಿ ಒಂದು ಗಂಟೆ ಮಾನ್ಯವಾಗಲಿದೆ. ಒಂದು ವೇಳೆ ಒಂದು ಗಂಟೆಗಿಂತ ಹೆಚ್ಚು ಕಾಲ ಮಾರುಕಟ್ಟೆಯಲ್ಲಿದ್ದರೆ 500 ರೂಪಾಯಿ ದಂಡ ವಿಧಿಸಬೇಕಾಗುತ್ತದೆ. ನಾಸಿಕ್ ಮಹಾನಗರ ಪಾಲಿಕೆ ಈ ಶುಲ್ಕವನ್ನು ಸಂಗ್ರಹಿಸಲಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಬೆಂಬಲ ನೀಡಿದ್ದಾರೆ.
ಮಾರುಕಟ್ಟೆ ಪ್ರವೇಶ ಮಾಡಲು ಒಂದೇ ಮಾರ್ಗವಿರಲಿದೆ. ಮಾರುಕಟ್ಟೆ ಪ್ರವೇಶ ಮಾಡಲು ಗುರುತಿನ ಚೀಟಿ ತೋರಿಸಬೇಕಾಗುತ್ತದೆ. ನಾಸಿಕ್ ನಲ್ಲಿ ಸೋಮವಾರ 2847 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ನಾಸಿಕ್ ಜಿಲ್ಲೆಯಲ್ಲಿ 25 ಜನರು ಸಾವನ್ನಪ್ಪಿದ್ದಾರೆ.