
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣರಾಜ್ಯೋತ್ಸವದಂದು ದುಬೈನಿಂದ ಉಡುಗೊರೆಯೊಂದು ಬಂದು ತಲುಪಿದೆ. ಅದೂ 14 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಕಳುಹಿಸಿರುವ ಗಿಫ್ಟ್.
ಹೌದು, ಕೇರಳ ಮೂಲದ ಸರನ್ ಸಸಿಕುಮಾರ್ ಎಂಬಾತ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಅವರದೇ ಚಿತ್ರವೊಂದನ್ನು ಅದ್ಭುತವಾಗಿ ಚಿತ್ರಿಸಿ ಕೊಟ್ಟಿದ್ದಾನೆ.
ಸುಮಾರು 90 ಸೆಂಟಿಮೀಟರ್ ಅಗಲ ಮತ್ತು 60 ಸೆಂಟಿಮೀಟರ್ ಉದ್ದವಿರುವ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಲಾಂಛನ ಮತ್ತು ಅಗಲವಾದ ಅಂಚುಳ್ಳ ಟೋಪಿ ಧರಿಸಿ ಸೆಲ್ಯೂಟ್ ಮಾಡುತ್ತಿರುವ ಮಾದರಿಯಲ್ಲಿ ಚಿತ್ರಿಸಲಾಗಿದೆ.
ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ಅವರು ಮೂರು ದಿನಗಳ ಕಾಲ ಯುಎಇ ಪ್ರವಾದಲ್ಲಿರುವುದು ಗೊತ್ತಾಗಿದೆ.
ಸಚಿವ ಮುರಳೀಧರನ್ ಅವರಿಗೆ ಚಿತ್ರಪಟ ತಲುಪಿಸಿದ್ದು, ಇದನ್ನು ಸಚಿವರೇ ಟ್ವಿಟ್ಟರ್ ನಲ್ಲಿ ಹಂಚಿ ಮೆಚ್ಚಿ ಕೊಂಡಾಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಪ್ರಧಾನಿಗೆ ಈ ಉಡುಗೊರೆ ತಲುಪಿದೆ.