ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆ ಜನರಿಗೆ ಅರಿವು ಮೂಡಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಜನರಿಗೆ ಇಷ್ಟವಾಗುವ ಮತ್ತು ಹೆಚ್ಚು ಪ್ರಚಲಿತದ ಸಂಗತಿಯನ್ನೇ ಬಳಸಿ ಜಾಗೃತಿ ಮೂಡಿಸುವ ಟ್ರೆಂಡ್ ಕೂಡ ಪೊಲೀಸರು ಬಳಸುತ್ತಿದ್ದಾರೆ.
ಹೀಗೆಯೇ ನಾಗ್ಪುರ ಪೊಲೀಸರು ಬ್ಯಾಂಕಿಂಗ್ ಸುರಕ್ಷತಾ ಸಂದೇಶಕ್ಕೆ ಮೆಮೆ, ಜೋಕ್‌ಗಳನ್ನು ಬಳಸುತ್ತಿದ್ದು, ಒಂದು ಮೆಮೆಗೆ ನಗುತರಿಸುವಂತಹ ವರುಣ್ ಚಕ್ರವರ್ತಿಯವರ ಫೋಟೋ ಬಳಸಿದೆ.
ಐಪಿಎಲ್ ಹವಾ ಇರುವ ಈ ವೇಳೆ ಐಪಿಎಲ್ ಆಟಗಾರ ವರುಣ್ ಚಕ್ರವರ್ತಿಯವರ ಕಣ್ಣರಳಿಸಿ ತಲೆ ಮೇಲೆ ಕೈಹೊತ್ತ ಫೋಟೋ ಬಳಸಿ, ನಿಮ್ಮ ಒಟಿಪಿಯನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಆಗುವ ಅಪಾಯ ತಿಳಿಸುವ ಮೆಮೆ ತಯಾರಿಸಿದ್ದಾರೆ ಈ ಪೊಲೀಸರು.
ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ವರುಣ್ ಚಕ್ರವರ್ತಿಯವರ ಈ ಚಿತ್ರದಲ್ಲಿ ಆತಂಕದ ಅಭಿವ್ಯಕ್ತಿ ಕಾಣಿಸುತ್ತದೆ. ಅನ್ಯರಿಗೆ ಒಟಿಪಿ ಹಂಚಿಕೊಂಡ ನಂತರ ಗಾಬರಿಗೊಂಡ ಸಂದರ್ಭಕ್ಕೆ ಈ ಚಿತ್ರ ಹೋಲುತ್ತದೆ ಎಂಬುದು ಪೊಲೀಸರ ಅಭಿಪ್ರಾಯ. ಯಾರೇ ಕರೆಮಾಡಿದರೂ ಪರವಾಗಿಲ್ಲ, ನಿಮ್ಮ ಗೌಪ್ಯ ಮಾಹಿತಿಯಾದ ಒಟಿಪಿ, ಸಿವಿವಿ ಇತ್ಯಾದಿಗಳನ್ನು ಎಂದಿಗೂ ನೀಡಬೇಡಿ ಎಂದು ಅವರು ಎಚ್ಚರಿಕೆ ಸಾಲನ್ನು ಮೆಮೆ ಜತೆ ಬರೆದಿದ್ದಾರೆ. ಹಾಸ್ಯಮಯ ಈ ಮೆಮೆ ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಹೆಚ್ಚಿನ ಪ್ರಶಂಸೆ ಗಳಿಸಿದೆ.