ಗಂಡನ ಕುಡಿತದ ಚಟ, ಮಾನಸಿಕ – ದೈಹಿಕ ಹಿಂಸೆ, ಅಕ್ರಮ ಸಂಬಂಧ, ಕಿರುಕುಳ ಹೀಗೆ ವಿವಿಧ ಕಾರಣಕ್ಕಾಗಿ ಪತಿ – ಪತ್ನಿ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಗಂಡನ ಅತಿಯಾದ ಪ್ರೀತಿ ತನಗೆ ಉಸಿರುಗಟ್ಟಿಸುತ್ತಿದೆ ಎಂದು ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 18 ತಿಂಗಳ ಹಿಂದೆ ಮದುವೆಯಾದ ಮಹಿಳೆ ಇದೀಗ ತನಗೆ ಪತಿಯಿಂದ ವಿಚ್ಛೇದನ ನೀಡುವಂತೆ ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ.
ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಕಾರಣ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಮಹಿಳೆ ತನ್ನ ಪತಿ ತನ್ನನ್ನು ತುಂಬಾ ಪ್ರೀತಿಸುತ್ತಾನೆ, ಇದುವರೆಗೂ ಜಗಳ ಮಾಡಿಲ್ಲ. ತಾನು ತಪ್ಪು ಮಾಡಿದರೂ ಕ್ಷಮಿಸಿ ಪ್ರೀತಿ ಮಾಡುತ್ತಾನೆ. ಒಮ್ಮೊಮ್ಮೆ ಮನೆ ಕೆಲಸ, ಅಡುಗೆ ಕೆಲಸವನ್ನೂ ತಾನೇ ಮಾಡುತ್ತಾನೆ. ನನಗೆ ಯಾವೊಂದು ಕೆಲಸ ಮಾಡಲೂ ಬಿಡಲ್ಲ. ನಾನು ವಾದ ಮಾಡಿ, ಜಗಳವಾಡಿದರೂ ಅದಕ್ಕೂ ಬೈಯ್ಯುವುದೂ ಇಲ್ಲ. ಹೀಗೆ ಎಲ್ಲವನ್ನು ಸಹಿಸಿಕೊಂಡು ಅತಿಯಾಗಿ ಪ್ರೀತಿಸುವ ಗಂಡನ ಪ್ರೀತಿ ತನಗೆ ಉಸಿರುಕಟ್ಟಿದಂತಾಗುತ್ತಿದೆ. ಇದೇ ಕಾರಣಕ್ಕೆ ತಮಗೆ ವಿಚ್ಛೇದನ ನೀಡುವಂತೆ ಕೋರಿದ್ದಾಳೆ.
ಮಹಿಳೆ ಮಾತು ಕೇಳಿದ ನ್ಯಾಯಾಧೀಶರೇ ಅವಾಕ್ಕಾಗಿದ್ದಾರೆ. ಇದಕ್ಕೆ ಪತಿಯನ್ನು ಕೇಳಿದಾಗ ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದೇ ನನ್ನ ಆಸೆ. ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದಿದ್ದಾನೆ. ಪತಿ – ಪತ್ನಿ ಮಾತು ಕೇಳಿ ಇದು ವಿಚ್ಛೇದನಕ್ಕೆ ಸಮರ್ಪಕ ಕಾರಣವಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದಾರೆ ನ್ಯಾಯಾಧೀಶರು.