ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಮೃತಪಟ್ಟ ವಾರ್ಡ್ ಬಾಯ್ ಮಹಿಪಾಲ್ ಸಿಂಗ್ ಪುತ್ರ ಇದೀಗ ತಮ್ಮ ತಂದೆಯ ಸಾವಿಗೆ ಕೊರೊನಾ ಲಸಿಕೆಯೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮೊರಾದಾಬಾದ್ ಜಿಲ್ಲಾಸ್ಪತ್ರೆಯ ವಾರ್ಡ್ ಬಾಯ್ ಆಗಿದ್ದ ಮಹಿಪಾಲ್ ಸಿಂಗ್ ಲಸಿಕೆ ಸ್ವೀಕರಿಸಿದ 30 ಗಂಟೆ ಬಳಿಕ ಸಾವನ್ನಪ್ಪಿದ್ದಾರೆ.
ನನ್ನ ತಂದೆ ಕೊರೊನಾ ಲಸಿಕೆ ಸ್ವೀಕಾರಕ್ಕೂ ಮುನ್ನ ಆರೋಗ್ಯವಾಗಿಯೇ ಇದ್ರು. ಜನವರಿ 16ರಂದು ಎಂದಿನಂತೆ ಆಸ್ಪತ್ರೆಗೆ ನನ್ನ ತಂದೆ ತೆರಳಿದ್ದರು. 12.30ರ ಸುಮಾರಿಗೆ ನಾನು ಮನೆಯಲ್ಲಿದ್ದ ವೇಳೆ ನನಗೆ ಕರೆ ಮಾಡಿ ಲಸಿಕೆ ಸ್ವೀಕರಿಸುತ್ತಿರೋದಾಗಿ ಹೇಳಿದ್ದರು. ಲಸಿಕೆ ತೆಗೆದುಕೊಂಡಿದ್ದರಿಂದ ನನಗೆ ಗಾಡಿ ಬಿಡೋಕೆ ಸಾಧ್ಯವಿಲ್ಲ. ಹೀಗಾಗಿ ನೀನೇ ಬಾ ಎಂದಿದ್ದರು.
ನಾನೇ ಆಸ್ಪತ್ರೆಗೆ ಬೈಕ್ ತೆಗೆದುಕೊಂಡು ಹೋಗಿದ್ದೆ. ಈ ವೇಳೆ ನನ್ನ ತಂದೆ ಮೊದಲಿನ ರೀತಿ ಇರಲೇ ಇಲ್ಲ. ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ನಾನು ಅವರನ್ನು ಕೂಡಲೇ ಮನೆಗೆ ಕರೆದುಕೊಂಡು ಬಂದೆ. ಮನೆಗೆ ಬಂದ ಬಳಿಕ ನನ್ನ ತಂದೆ ಅಸ್ವಸ್ಥರಾಗಿಯೇ ಇದ್ದರು. ನಾನು ಬಳಿಕ ಮನೆಯಿಂದ ಹೊರ ಹೋಗಿದ್ದೆ. ಆದರೆ ಬೆಳಗ್ಗೆಯಾಗುತ್ತಿದ್ದಂತೆಯೇ ಅವರ ಜ್ವರ ಹೆಚ್ಚಾಗುತ್ತಲೇ ಹೋಯ್ತು. ಆಂಬುಲೆನ್ಸ್ ಸೇವೆಯೂ ನಮಗೆ ತಕ್ಷಣಕ್ಕೆ ಸಿಗಲಿಲ್ಲ. ಹೀಗಾಗಿ ನಾವು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಹೋದ್ವಿ. ಆದರೆ ಆಸ್ಪತ್ರೆಯಲ್ಲೂ ಯಾರೂ ಅವರನ್ನ ಸರಿಯಾಗಿ ಶುಶ್ರೂಷೆ ಮಾಡಲಿಲ್ಲ. ಕೊನೆಗೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪುತ್ರ ಹೇಳಿದ್ದಾನೆ.