ಗೆಳತಿಯ ಮನೆಯಿಂದ ರಾತ್ರಿ ವೇಳೆ ಹೊರಬರುತ್ತಿದ್ದ ವ್ಯಕ್ತಿಯನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ನೈತಿಕ ಪೋಲೀಸ್ ಗಿರಿಯಿಂದ ಕ್ರೂರವಾಗಿ 33 ವರ್ಷದ ಬಸ್ ಚಾಲಕ ಸಹರ್ ನನ್ನು ಥಳಿಸಲಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಇದೀಗ ಸಾವನ್ನಪ್ಪಿದ್ದು ಹಲ್ಲೆಯ ಕಾರಣ ಗೊತ್ತಾಗಿದೆ. ಚಿರಕಲ್ ಮೂಲದ ಸಹರ್ ಫೆಬ್ರವರಿ 18 ರಿಂದ ತ್ರಿಶೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪ್ರಕರಣದಲ್ಲಿ ಇದುವರೆಗೆ ಎಂಟು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 18 ರಂದು ಘಟನೆ ನಡೆದಿದ್ದು, ಫೆಬ್ರವರಿ 21 ರಂದು ಪೊಲೀಸ್ ದೂರು ದಾಖಲಾಗಿತ್ತು. ಆರು ಆರೋಪಿಗಳಾದ ರಾಹುಲ್, ಬಿಜಿತ್, ವಿಷ್ಣು, ಬಿನು, ಅರುಣ್, ಅಭಿಲಾಷ್, ಸಂತ್ರಸ್ತ ಸಹರ್ ಬರುವಿಕೆಗಾಗಿ ಹುಡುಗಿಯ ಮನೆಯ ಬಳಿ ಕಾಯುತ್ತಿದ್ದರು.
ಆಪಾದಿತ ಹಲ್ಲೆಯ ವೀಡಿಯೋ ಹತ್ತಿರದ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳ ಪ್ರಕಾರ, ಸಹರ್ ರಾತ್ರಿ ಸ್ನೇಹಿತೆಯ ಮನೆಯಿಂದ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಈ ವೇಳೆ ಜನರ ಗುಂಪು ಅವನನ್ನು ಪ್ರಶ್ನಿಸಿದೆ.
ಗುಂಪಿನಿಂದ ಥಳಿತಕ್ಕೊಳಗಾದ ನಂತರ ಸಹರ್ ಮನೆಗೆ ಹೋಗಿದ್ದಾರೆ. ಆದರೆ ಮರುದಿನ ಬೆಳಿಗ್ಗೆ, ತೀವ್ರ ನೋವು ಅನುಭವಿಸಿದ ನಂತರ, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಒಂದು ವಾರದಲ್ಲಿ ಸಹರ್ ಅವರ ಆರೋಗ್ಯ ಹದಗೆಟ್ಟಿತು ಎಂದು ವರದಿಗಳು ತಿಳಿಸಿವೆ.
ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.