ಬರೋಬ್ಬರಿ ಒಂದು ತಿಂಗಳಿನಿಂದ ಪ್ರತಿ ದಿನ 11 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳನ್ನ ವರದಿ ಮಾಡುತ್ತಿದ್ದ ಮುಂಬೈನಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 2624 ಪ್ರಕರಣಗಳು ವರದಿಯಾಗಿದೆ.
ಆದರೆ ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 78 ಸಾವುಗಳು ವರದಿಯಾಗಿದ್ದು ಈ ಮೂಲಕ ಮರಣ ಪ್ರಮಾಣ 2.9 ಪ್ರತಿಶತವೇ ಇದೆ. ಈ ಮೂಲಕ ಮುಂಬೈನಲ್ಲಿ ಒಟ್ಟು ಕೊರೊನಾ ಪ್ರಕರಣಗಳು 6.58 ಲಕ್ಷ ಆಗಿದ್ದರೆ ಸಾವಿನ ಸಂಖ್ಯೆ 13,372 ಆಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 48,621 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 567 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 47.7 ಲಕ್ಷ ಆಗಿದೆ. ಹಾಗೂ ಸಾವಿನ ಸಂಖ್ಯೆ 70,851ಕ್ಕೆ ಏರಿಕೆ ಕಂಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿಸ ಬಿಎಂಸಿ ಕಮಿಷನರ್ ಐ.ಎಸ್. ಚಹಲ್, ಟೆಸ್ಟಿಂಗ್ ಪಾಲಿಸಿಯಲ್ಲಿ ವೇಗವನ್ನ ಕಾಯ್ದುಕೊಂಡಿದ್ದೇ ನಗರದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗೋದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಕೇವಲ ಮುಂಬೈ ಮಾತ್ರವಲ್ಲದೇ ಮಹಾರಾಷ್ಟ್ರದ 12 ಜಿಲ್ಲೆಗಳು ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ದಾಖಲಿಸಿದೆ. ಮುಂಬೈ, ಔರಂಗಾಬಾದ್, ಭಾಂದರಾ, ಧುಲೆ, ಗೋಂಡಿಯಾ, ಲಾತುರ್, ಜಲ್ಗಾಂವ್, ನಾಂದೇಡ್, ಥಾಣೆಯಲ್ಲಿ ಲಾಕ್ಡೌನ್ ಬಳಿಕ ಕೊರೊನಾ ಪ್ರಮಾಣದಲ್ಲಿ ಇಳಿಕೆ ಕಂಡಿದೆ.